ಮೈಸೂರು: ನನ್ನನ್ನೂ ಭಾವಿ ಮುಖ್ಯಮಂತ್ರಿ ಎಂದು ಕಾರ್ಯಕರ್ತರು ಕೂಗುತ್ತಿದ್ದರು. ಹಾಗೆ ಕೂಗಬೇಡಿ ಎಂದು ಬುದ್ಧಿ ಹೇಳಿದ್ದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುತ್ತೂರು ಮಠಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಈಗಲೇ ಈ ವಿಚಾರ ಚರ್ಚೆ ಸರಿಯಲ್ಲ. ನಾವೆಲ್ಲಾ ಗೆಲ್ಲಬೇಕು, ಬಹುಮತ ಬರಬೇಕು ನಂತರ ಶಾಸಕರು ಅಭಿಪ್ರಾಯ ಹೇಳುತ್ತಾರೆ. ಇಲ್ಲಿಯವರೆಗೆ ಕಾಂಗ್ರೆಸ್ ಶಾಸಕರು ಶಾಸಕಾಂಗ ಸಭೆಯಲ್ಲಿ ನಿರ್ದಿಷ್ಟವಾಗಿ ಇವರೇ ಮುಖ್ಯಮಂತ್ರಿ ಎಂದು ಹೆಸರು ಸೂಚಿಸಿಲ್ಲ. ಕೇವಲ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದಾರೆ. ಇದೇ ಸಂಸ್ಕೃತಿ ಮುಂದೆಯೂ ಇರಲಿದೆ ಎಂದರು.
ನೀವೂ ಸಿಎಂ ಆಕಾಂಕ್ವಿಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಮಯ, ಸಂದರ್ಭ ಬಂದಾಗ ಅದನ್ನು ಹೇಳುತ್ತೇನೆ ಎಂದ ಅವರು ನಮ್ಮ ಸ್ನೇಹಿತರು, ಹಿರಿಯರಲ್ಲಿ ಮನವಿ ಮಾಡುತ್ತೇನೆ, ಸಿಎಂ ವಿಚಾರದ ಚರ್ಚೆ ನಿಲ್ಲಿಸಿ, ಅದನ್ನು ಇನ್ನು ಬೆಳಸಬೇಡಿ ಎಂದು ಸಲಹೆ ನೀಡಿದರು.
ಬಿಜೆಪಿ ಕಾರ್ಯಕರ್ತರು ತಾವೇ ವ್ಯಾಕ್ಸಿನ್ ತಯಾರಿಸಿ ಹಂಚುತ್ತಿರುವ ರೀತಿ ವರ್ತಿಸುತ್ತಿರುವುದು ಸರಿಯಾದ ಕ್ರಮವಲ್ಲ. ಬಿಜೆಪಿ ಕಾರ್ಯಕರ್ತರೆ ಬೇಕಾದರೆ ತಮ್ಮ ಹಣದಲ್ಲಿ ಹಂಚಿ ಪ್ರಚಾರ ಪಡೆಯಲಿ. ಅದು ಬಿಟ್ಟು ಸರ್ಕಾರ ಹಂಚುತ್ತಿರುವ ವ್ಯಾಕ್ಸಿನ್‌ನಲ್ಲಿ ಪಕ್ಷದ ಪ್ರಚಾರ ಒಳೆಯದ್ದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಕೊರೊನಾ ಸೋಂಕಿನ ನಿಯಂತ್ರಣದಲ್ಲಿ ವಿಫಲವಾಗಿವೆ. ಕೋವಿಡ್ ನಿಯಂತ್ರಣದ ಪೂರ್ವ ಸಿದ್ಧತೆ ಸರಿಯಾಗಿ ಮಾಡಲಿಲ್ಲ. ಖಾಸಗಿ ಆಸ್ಪತ್ರೆಗಳನ್ನು ಇನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಇದು ಸರ್ಕಾರದ ವಿಫಲತೆ. ಇದರಿಂದ ಹೆಚ್ಚಿನ ಸಾವುಗಳು ಆದವು ಎಂದು ವಿಷಾದಿಸಿದರು.