ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಕುಸಿಯುತ್ತಿದ್ದು, ಪರ್ಯಾಯ ನಾಯಕತ್ವ ಬೇಕಾಗಿದೆ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಗಾರಪ್ಪ ಅವರ ಕಾಲದಲ್ಲಿ ಕ್ಲಾಸಿಕ್ ಕಂಪ್ಯೂಟರ್, ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಬಾಟ್ನಿಂಗ್ ಹಗರಣದಿಂದ ನಾಯಕತ್ವವೇ ಕುಸಿದು ಹೋಯಿತು. ಇಲ್ಲಿಯೂ ನಾಯಕತ್ವ ಕುಸಿಯುತ್ತಿದೆ. ಇದರಿಂದ ಪಕ್ಷಕ್ಕೆ ಪ್ರಯೋಜನ ಇಲ್ಲ. ಅವರ ಮಾರ್ಗದರ್ಶನದಲ್ಲಿ ಪರ್ಯಾಯ ನಾಯಕತ್ವ ಕೊಡಿ. ವೀರಶೈವರಿಗೇ ಕೊಡಿ ಎಂದು ಆಗ್ರಹಿಸಿದರು.
ನಾನು ಪಕ್ಷದ ಕಾರ್ಯಕ್ರಮಗಳ ಬಗ್ಗೆ ಮಾತನಾಡಿಲ್ಲ. ನಾನು ಮಾತನಾಡಿರುವುದು ಪಕ್ಷದ ನೈತಿಕತೆ, ಪಾರದರ್ಶಕತೆ, ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ. ನನ್ನ ಮೇಲೆ ಕ್ರಮ ತೆಗೆದುಕೊಳ್ಳಿ. ಆದರೆ, ಯಾರ ಮೇಲೆ ಕ್ರಮ ತೆಗೆದುಕೊಳ್ಳುವುದು ಎಂಬುದು ಬಹಳ ಮುಖ್ಯ. ಸತ್ಯ ಹೇಳುವವರ ಮೇಲೆ ಕ್ರಮ ತೆಗೆದುಕೊಳ್ಳುವುದಲ್ಲ. ಜನಾಭಿಪ್ರಾಯ ಯಾರಿಂದ ಕುಸಿಯುತ್ತಿದೆ ಎಂಬುದನ್ನು ನೀವು ನೋಡಬೇಕು ಎಂದು ತಿಳಿಸಿದರು.
ನೀವು ಬಿಜೆಪಿಯವರೇ ಎಂದು ರೇಣುಕಾಚಾರ್ಯ ಕೇಳುತ್ತಾನೆ. ನಾನು ಶುದ್ಧ ಬಿಜೆಪಿಯವ, ನೀನು ಮಿಕ್ಸಡ್ ಬಿಜೆಪಿ. ಕೆಜೆಪಿಯಿಂದ ಬಂದವನು ನೀನು. ಹಿಂದೆ ಇದೇ ಯಡಿಯೂರಪ್ಪರ ವಿರುದ್ಧ ನನ್ನನ್ನು ಸಚಿವ ಮಾಡಲಿಲ್ಲ ಎಂದು ಹೈದರಾಬಾದ್ಗೆ ಓಡಿ ಹೋಗಿದ್ರಲ್ಲ? ನಂತರ ನಿಮ್ಮನ್ನು ಯಾಕೆ ಸಚಿವ ಸ್ಥಾನದಿಂದ ತೆಗೆದರು? ಜಯಲಕ್ಷ್ಮೀ ನರ್ಸ್ ಕಥೆ ಏನಾಯ್ತು ಎಂದು ರೇಣುಕಾಚಾರ್ಯ ವಿರುದ್ಧ ಹರಿಹಾಯ್ದರು.
ಹಾಲಪ್ಪ ನೀನು ಸ್ನೇಹಿತನ ಮನೆಗೆ ಊಟಕ್ಕೆ ಹೋಗಿ, ಆತನ ಹೆಂಡತಿಯನ್ನು ಅತ್ಯಾಚಾರ ಮಾಡಲು ಪ್ರಯತ್ನಿಸಿ ಸಚಿವ ಸ್ಥಾನ ಕಳೆದುಕೊಂಡೆ. ನನ್ನ ವಿರುದ್ಧ ಮಾತನಾಡುತ್ತೀರಾ ನೀವು ಎಂದು ಹಾಲಪ್ಪ ವಿರುದ್ಧ ಹರಿಹಾಯ್ದರು.
ನನ್ನಂಥ ಹುಚ್ಚನ ತ್ಯಾಗದಿಂದ ಇಂದು ನೀನು ಬಿಡಿಎ ಅಧ್ಯಕ್ಷ ಆಗಿದ್ದೀಯಾ? ದೋಚುತ್ತಿದ್ದೀಯಾ. ನಿಮ್ಮಂಥ ಭ್ರಷ್ಟರು ನನಗೆ ಪಾಠ ಹೇಳುತ್ತೀರಾ ಎಂದು ಬಿಡಿಎ ಅಧ್ಯಕ್ಷ ವಿಶ್ವನಾಥ್ ವಿರುದ್ಧವೂ ಕಿಡಿಕಾರಿದರು.