ಮೈಸೂರು: ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಪದವಿ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಮೀಸಲಾತಿ ಕಲ್ಪಿಸಲಾಗಿದೆ. ಹೀಗಾಗಿ ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಸೀಟು ಮೀಸಲಾತಿಯಡಿ ಪ್ರವೇಶ ಪಡೆಯಬಹುದಾಗಿದೆ. ಈ ಬಗ್ಗೆ ಹೆಚ್ಚು ಪ್ರಚಾರ ಮಾಡಲು ಮೈಸೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ಕ್ರಾಫರ್ಡ್ ಭವನದ ಸಿಂಡಿಕೇಟ್ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಮಾತನಾಡಿದ ಅವರು, ಪದವಿ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಇಚ್ಛಿಸುವ ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಕಳೆದ ಕೆಲ ವರ್ಷಗಳಿಂದಲೂ ಸೀಟು ಮೀಸಲಿರಿಸಲಾಗಿದೆ.
ಆದರೆ, ಈ ಬಗ್ಗೆ ಹೆಚ್ಚಿನ ಪ್ರಚಾರ ಇಲ್ಲದ ಕಾರಣ ತೃತೀಯ ಲಿಂಗಿಗಳು ಇದರ ಪ್ರಯೋಜನ ಪಡೆಯಲು ವಿಫಲರಾಗುತ್ತಿದ್ದಾರೆ. ಆದ್ದರಿಂದ ಸೀಟು ಮೀಸಲು ಕುರಿತು ಹೆಚ್ಚಿನ ಪ್ರಚಾರ ಮಾಡುವಂತೆ ಸಿಂಡಿಕೇಟ್ ಸದಸ್ಯೆ ಡಾ. ಚೈತ್ರ ನಾರಾಯಣ್ ಪ್ರಸ್ತಾವನೆ ಸಲ್ಲಿಸಿದ್ದರು. ಈ ಬಗ್ಗೆ ಚರ್ಚಿಸಿದ ಸಿಂಡಿಕೇಟ್, ತೃತೀಯ ಲಿಂಗಿಗಳಿಗೆ ಸೀಟು ಮೀಸಲಿಟ್ಟಿರುವ ಬಗ್ಗೆ ಅಗತ್ಯ ಪ್ರಚಾರ ಕೈಗೊಂಡು ಯೋಜನೆ ಉದ್ದೇಶ ಕೈಗೂಡಲು ಸಹಕರಿಸುವಂತೆ ಸಲಹೆ ನೀಡಿದರು.
ವಿವಿ, ವಿದ್ಯಾರ್ಥಿಗಳ ಪ್ರವೇಶಾತಿ ಸಂದರ್ಭದಲ್ಲಿ ಈ ಸೀಟು ಮೀಸಲು ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ತೀರ್ಮಾನ ತೆಗೆದುಕೊಂಡಿತು ಎಂದು ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.