NEWSನಮ್ಮರಾಜ್ಯರಾಜಕೀಯ

ಸಿದ್ದಕಲೆ’, ’ಸಿದ್ದಸೂತ್ರ ’, ’ಸಿದ್ದ ಹಸ್ತ ಶೂರ’ ಮುಸ್ಲಿಂ ನಾಯಕರ ‘ಟರ್ಮಿನೇಟರ್’: ಹೆಸರು ಹೇಳದೇ ಎಚ್ಡಿಕೆ ಕುಟುಕಿದ್ದು ಯಾರನ್ನು?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ‘ಸಿದ್ದಕಲೆ’, ’ಸಿದ್ದಸೂತ್ರ ’, ’ಸಿದ್ದ ಹಸ್ತ ಶೂರ’ ಎಂಬಿತ್ಯಾದಿ ಪದಗಳನ್ನು ಉಲ್ಲೇ ಖಿಸಿ ಟ್ವೀಟ್ ಮಾಡಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ವಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಅವರು ‘ಅಲ್ಪ ಸಂಖ್ಯಾತರ ಅಂತ್ಯ ರಾಜಕಾರಣʼದ ಟರ್ಮಿನೇಟರ್ (ಅಂತ್ಯ ಗೊಳಿಸುವವರು) ಆಗಿಹೊರಹೊಮ್ಮಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣದ ಪೇಟೆಂಟ್ ತೆಗೆದುಕೊಂಡಂತೆ ಪೋಸು ಕೊಡುವ ʼಸಿದ್ದಹಸ್ತʼ ಶೂರನ ನಿಜಬಣ್ಣ ಬಯಲು ಮಾಡುವ ಸಂದರ್ಭ ಬಂದಿದೆ. ಸ್ವಾರ್ಥ, ಸ್ವಜನ ಪಕ್ಷಪಾತ, ತಮ್ಮ ಬೆಂಬಲಿಗರ ರಾಜಕೀಯ ಅಭಿವೃದ್ಧಿಗಾಗಿ ಪಕ್ಷಕ್ಕಾಗಿ ಅಹರ್ನಿಷಿ ದುಡಿದ ಅಲ್ಪಸಂಖ್ಯಾತ ನಾಯಕರನ್ನು ಗುರಿ ಇಟ್ಟು ಮುಗಿಸಲಾಗುತ್ತಿದೆ! ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತನ್ನೆಲ್ಲ ಸಿದ್ದಕಲೆ, ಸಿದ್ದಸೂತ್ರಗಳೆನ್ನೆಲ್ಲ ಪೋಣಿಸಿ ʼಅಹಿಂದʼ ಎಂದು ಜನರನ್ನು ‘ಅಡ್ಡದಾರಿ’ ಹಿಡಿಸಿದ ʼಸಿದ್ದಹಸ್ತ ಶೂರರುʼ ತಮ್ಮ ಸ್ವಪಕ್ಷದಲ್ಲೇ ಮುಸ್ಲೀಂ ನಾಯಕರನ್ನು ಒಬ್ಬೊಬ್ಬರನ್ನಾಗಿಯೇ ಟಾರ್ಗೆಟ್ ಮಾಡುತ್ತಾ ʼಅಲ್ಪಸಂಖ್ಯಾತರ ಅಂತ್ಯ ರಾಜಕಾರಣʼದ ಟರ್ಮಿನೇಟರ್‌ ಆಗಿ ಹೊರಹೊಮ್ಮಿದ್ದಾರೆ ಎಂದು ಕಿಡಿಕಾರಿದ್ದಾರೆ.

ನಂಬಿ ಅಧಿಕಾರ ಕೊಟ್ಟ ಪಕ್ಷದ ಕತ್ತನ್ನೇ ಕುಯ್ಯುವ, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವ ʼಸಿದ್ದಹಸ್ತ ಸೂತ್ರಧಾರಿʼಯ ಒಳ ರಾಜಕೀಯಕ್ಕೆ ಬಲಿಯಾಗುತ್ತಿರುವ ಅಲ್ಪಸಂಖ್ಯಾತ ನಾಯಕರ ದೊಡ್ಡ ಪಟ್ಟಿಯೇ ಇದೆ. ಕಾಂಗ್ರೆಸ್ʼನಲ್ಲಿ ನಡೆದಿರುವ ಅಲ್ಪಸಂಖ್ಯಾತ ನಾಯಕರ ʼರಾಜಕೀಯ ನರಮೇಧʼಕ್ಕೆ ಯಾರು ಕಾರಣ ಎಂದು ಜನರಿಗೆ ಗೊತ್ತಾಗಲಿ ಎಂದು ಹೇಳಿದ್ದಾರೆ.

2012ರ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಇಕ್ಬಾಲ್ ಅಹಮದ್ ಸರಡಗಿ ಸೋಲುತ್ತಾರೆ. ಪಕ್ಷೇತರ ಅಭ್ಯರ್ಥಿಯಾಗಿದ್ದ ಭೈರತಿ ಸುರೇಶ್ ತಮ್ಮ ಗೆಲುವಿಗೆ ಬೇಕಿದ್ದ 19 ಮತ ಮೀರಿ 23 ಮತ ಪಡೆದು ಗೆಲ್ಲುತ್ತಾರೆ!! ಇಲ್ಲಿ ಸರಡಗಿ ಸೋಲಿಗೆ, ಬೈರತಿ ಸುರೇಶ್ ಗೆಲುವಿಗೆ ಕಾರಣವಾದ ʼಸಿದ್ದಸೂತ್ರʼ ಹಣೆದಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ.

ಈ ʼಸಿದ್ದಹಸ್ತರ ಸಿದ್ದಸೂತ್ರʼ ಅಲ್ಲಿಗೇ ನಿಲ್ಲುವುದಿಲ್ಲ. 2016ರಲ್ಲಿ ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಹಿರಿಯ ನಾಯಕ ಸಿ.ಕೆ.ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್ ಅವರಿಗೆ ಅಧಿಕೃತ ಟಿಕೆಟ್ ಕೊಡುತ್ತದೆ.

ಆಗ ಭೈರತಿ ಸುರೇಶ್ ಪರ ಲಾಬಿ ಮಾಡಿದ್ದ ಸಿದ್ಧಕಲೆ ಸೂತ್ರಧಾರರು, ಅವರನ್ನೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಒಳಸುಳಿ ಸೃಷ್ಟಿಸಿ ಷರೀಫರ ಮೊಮ್ಮಗನನ್ನು ಸೋಲಿಸುತ್ತಾರೆ! 2023ರ ಚುನಾವಣೆಯಲ್ಲಿ ಭೈರತಿ ಸುರೇಶ್ʼಗೇ ಹೆಬ್ಬಾಳದ ಕಾಂಗ್ರೆಸ್ ಟಿಕೆಟ್ ಗ್ಯಾರಂಟಿ. ಹಾಗಾದರೆ ಜಾಫರ್ ಷರೀಫರ ಮೊಮ್ಮಗನ ಕಥೆ ಏನು ಎಂದು ಕೇಳಿದ್ದಾರೆ.

ಕಳೆದ ಲೋಕಸಭೆ ಚುನಾವಣೆ ನಂತರ ತಮಗೆ ಆಗುತ್ತಿರುವ ಅನ್ಯಾಯ ಪ್ರಶ್ನಿಸಿದ ರೋಷನ್ ಬೇಗ್‌ʼಗೆ ಶೋಕಾಸ್ ನೊಟೀಸ್ ನೀಡಿ, ತಮ್ಮನ್ನು ಬಹಿರಂಗವಾಗಿ ಪ್ರಶ್ನಿಸಿದರು ಎಂಬ ಕಾರಣಕ್ಕೆ ಅವರನ್ನು ಬೇಕಾಬಿಟ್ಟಿ ನಡೆಸಿಕೊಂಡು ಅಪಮಾನ ಮಾಡುತ್ತಾರೆ ಸಿದ್ದಹಸ್ತರು. ಕೊನೆಗೆ ರೋಷನ್ ಬೇಗ್ ಕಾಂಗ್ರೆಸ್ ಪಕ್ಷದಿಂದಲೇ ದೂರವಾಗುತ್ತಾರೆ.

ಮೈಸೂರಿನ ಹಿರಿಯ ನಾಯಕ ತನ್ವೀರ್ ಸೇಠ್ ಅವರನ್ನು ಅಪಮಾನಕರವಾಗಿ ನಡೆಸಿಕೊಂಡಿದ್ದು ಇದೇ ಸಿದ್ದಹಸ್ತರು. ಅಲ್ಲಿನ ಪಾಲಿಕೆಯಲ್ಲಿ ಜಾತ್ಯತೀತ ಶಕ್ತಿಗಳನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸಿದ ತನ್ವೀರ್ ಮೇಲೆ ಕೂಗಾಡಿದ ಸಿದ್ದಸೂತ್ರ ಪ್ರವೀಣರು, ಇನ್ನಿಲ್ಲದ ಅಪಮಾನ ಮಾಡಿ ನಿಂದಿಸುತ್ತಾರೆ ಎಂದು ಹೇಳಿದ್ದಾರೆ.

ಈಗ ಆಡಿಯೋ ನೆಪದಲ್ಲಿ ಸಲೀಂ ಮೊಹಮದ್ ಬಲಿ ಪಡೆದಾಗಿದೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟು ದೊಡ್ಡವರ ರಕ್ಷಣೆ ಮಾಡಲಾಗಿದೆ. ಸಲೀಂ ಹೇಳಿದ್ದೆಲ್ಲವನ್ನೂ ಕೇಳಿಕೊಂಡು ʼರಸಸ್ವಾದʼ ಮಾಡಿ ಪುಕ್ಕಟೆ ಮನರಂಜನೆ ಪಡೆದ ವ್ಯಕ್ತಿಗೆ ರಕ್ಷಣೆ ನೀಡಿ ಓರ್ವ ಅಲ್ಪಸಂಖ್ಯಾತ ನಾಯಕನನ್ನು 6 ವರ್ಷ ಉಚ್ಚಾಟಿಸಲಾಗಿದೆ. ಇದು ಯಾವ ಸೀಮೆ ನ್ಯಾಯ ಎಂದು ಪ್ರಶ್ನಿಸಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ ಎಂದರೆ ಇದೇನಾ ಸಿದ್ದಹಸ್ತರೇ? ತೊಟ್ಟಿಲನ್ನೂ ತೂಗುತ್ತಾ, ಮಗುವನ್ನೂ ಚಿವುಟುತ್ತಾ, ಸಾಧ್ಯವಾದರೆ ಆ ಮಗುವಿನ ಕತ್ತನ್ನೂ ಕುಯ್ಯುತ್ತಾ ನಡೆಸುತ್ತಿರುವ ಇಂಥ ನೀಚ ರಾಜರಾರಣ ಮುಸ್ಲೀಂ ಬಾಂಧವರಿಗೆ ಈಗ ಗೊತ್ತಾಗಿಬಿಟ್ಟಿದೆ ಎಂದು ಹೇಳಿದ್ದಾರೆ.

ಇಕ್ಬಾಲ್ ಸರಡಗಿ ಅವರನ್ನು ಸೋಲಿಸಿದಿರಿ, ಜಾಫರ್‌ ಷರೀಫರ ಮೊಮ್ಮಗನನ್ನು ಮುಗಿಸಿದಿರಿ, ರೋಷನ್ ಬೇಗ್ ವಿರುದ್ಧ ರೋಷ ತೀರಿಸಿಕೊಂಡಿರಿ, ತನ್ವೀರ್ ಸೇಠ್ ಮೇಲೆ ಹಗೆ ಸಾಧಿಸಿದಿರಿ, ಇನ್ನೊಬ್ಬರ ಮೇಲಿನ ಸೇಡನ್ನು ಬಡಪಾಯಿ ಸಲೀಂ ಮೇಲೆ ತಿರುಗಿಸಿ ಒಂದೇ ಕಲ್ಲಿನಲ್ಲಿ 2 ಹಕ್ಕಿ ಹೊಡೆದು ʼಕಿರಾತಕ ರಾಜಕಾರಣʼ ಮಾಡಿದಿರಿ ಎಂದು ಕಿಡಿಕಾರಿದ್ದಾರೆ.

ಚಕ್ರ ತಿರುಗುತ್ತಿದೆ, ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ. ಅಲ್ಪಸಂಖ್ಯಾತ ಬಾಂಧವರಿಗೆ ನಿಮ್ಮ ನಿಜಬಣ್ಣ ಗೊತ್ತಾಗಿದೆ ಸಿದ್ದಹಸ್ತರೇ. ನಿಮಗೆ ಪಾಠ ಕಲಿಸುವ ಜನತಾಪರ್ವ ಈಗಷ್ಟೇ ಆರಂಭವಾಗಿದೆ. ಕಾದು ನೋಡಿ ಎಂದು ತಿರುಗೇಟು ನೀಡಿದ್ದಾರೆ.

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ