ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆ ಕಾವು ಜೋರಾಗಿದ್ದು, ಮೂರು ಪಕ್ಷಗಳಲ್ಲೂ ಸಂಚಲನ ಆರಂಭವಾಗಿದೆ.
ಬಿಜೆಪಿ ಶಾಸಕ ಸಿಎಂ ಉದಾಸಿ ನಿಧನದಿಂದ ಹಾನಗಲ್ ಕ್ಷೇತ್ರ ತೆರವಾಗಿದ್ದು, ಉಪಚುನಾವಣೆಯ ಟಿಕೆಟ್‍ಗಾಗಿ ಕಾಂಗ್ರೆಸ್ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿಗಳನ್ನು ಹಾಕುವ ಸಂಬಂಧ ಒಂದು ಸುತ್ತಿನ ಸಭೆ ಮುಗಿಸಿದೆ. ಜೆಡಿಎಸ್ ಪಕ್ಷದ ನಾಯಕರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ಈ ಮಧ್ಯೆ ಹಾನಗಲ್ ಅಭ್ಯರ್ಥಿ ಬಗ್ಗೆ ಜೆಡಿಎಸ್ ಪಕ್ಷದ ನಾಯಕರು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಸಿಂದಗಿ ಕ್ಷೇತ್ರಕ್ಕೆ ನಿಯಾಜ್ ಖಾನ್ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದ್ದು ಅವರು ಈಗಾಗಲೇ ಕ್ಷೇತ್ರದ 150 ಗ್ರಾಮಗಳಲ್ಲಿ 800 ಸಭೆಗಳನ್ನು ನಡೆಸಿದ್ದಾರೆ. ಬೂತ್ ಮಟ್ಟದಿಂದ ನಾಯಕರಿಗೆ ಎಚ್.ಡಿ.ಕುಮಾರಸ್ವಾಮಿಯವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಈ ಬೆನ್ನಲ್ಲೇ ಹಾನಗಲ್ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‍ಗಾಗಿ ಭಾರಿ ಪೈಪೋಟಿ ಏರ್ಪಟ್ಟಿದ್ದು, ಟಿಕೆಟ್ ಆಕಾಂಕ್ಷಿಗಳಾಗಿರುವ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಸಚಿವ ಮನೋಹರ ತಹಶೀಲ್ದಾರ ಸೇರಿದಂತೆ ಇನ್ನು ಆನೇಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಧ್ಯಕ್ಷರಾದ ಸಲೀಂ ಅಹಮ್ಮದ್, ಧ್ರುವನಾರಾಯಣರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಸ್ಥಳೀಯರಿಗೆ ಟಿಕೆಟ್ ನೀಡಬೇಕು ನಾವು ಗಂಡಸರೇ, ಟಿಕೆಟ್ ನೀಡದಿದ್ದರೆ ಕೆಲಸ ಮಾಡುವುದಿಲ್ಲ ಎಂದು ಮಾಜಿ ಸಚಿವ ಮನೋಹರ ತಹಶೀಲ್ದಾರ್ ಕೈ ನಾಯಕರಿಗೆ ಬಹಿರಂಗವಾಗಿಯೇ ಎಚ್ಚರಿಕೆಯನ್ನು ನೀಡಿದ್ದರು.
ಇದರ ಬೆನ್ನಲ್ಲೆ ಹಾವೇರಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಲೀಂ ಅಹಮದ್, ಹಾಗೂ ಧ್ರುವನಾರಾಯಣರನ್ನು ಭೇಟಿ ಮಾಡಿ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸಿದ್ದಾರೆ.
ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಗೆ ಅನುಕಂಪದ ಅಲೆಯಿದ್ದು, ಉದಾಸಿ ಕುಟುಂಬಕ್ಕೆ ಬಿಜೆಪಿ ಟಿಕೆಟ್ ನೀಡುತ್ತದೆ ಎಂಬ ವಿಷಯ ದಟ್ಟವಾಗಿದೆ. ಮತ್ತೊಂದು ಕಡೆ ಕಾಂಗ್ರೆಸ್ ಹಾನಗಲ್ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳಲು ಗೆಲ್ಲುವ ಕುದರೆಗೆ ಮಣೆಹಾಕಲು ಅಭ್ಯರ್ಥಿಗಳ ಹುಡುಕಾಟ ನಡೆಸಿದೆ.
ಇನ್ನು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ನೇತೃತ್ವದಲ್ಲಿ ಈಗಾಗಲೇ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಹಾಕುವ ಸಂಬಂಧ ಒಂದು ಸುತ್ತಿನ ಸಭೆ ಮುಗಿದಿದೆ. ಕ್ಷೇತ್ರವಾರು ಮಟ್ಟದಲ್ಲಿ ಮತ್ತು ಬೆಂಗಳೂರಿನಲ್ಲಿ ಸಹ ಮುಂಬರುವ ದಿನಗಳಲ್ಲಿ ಇನ್ನಷ್ಟು ಸಭೆಗಳನ್ನು ನಡೆಸಲಾಗುವುದು.
ಜವಾಬ್ದಾರಿಯ ಕೆಲಸಗಳನ್ನು ನೀಡಿದ ನಂತರ ಚುನಾವಣಾ ಪ್ರಕ್ರಿಯೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಲಾಗುತ್ತಿದೆ. ಬಿಜೆಪಿಯಿಂದ ಕಳೆದ ಬಾರಿ ಸೋತ ರಮೇಶ್ ಬುನ್ಸೂರು ಅವರನ್ನು ಸಿಂದಗಿಯಲ್ಲಿ ಕಣಕ್ಕಿಳಿಸಲು ಮತ್ತು ಹಾನಗಲ್ ನಲ್ಲಿ ಹೊಸ ಅಭ್ಯರ್ಥಿಗೆ ಈ ಬಾರಿ ಮಣೆ ಹಾಕುವಂತಿದೆ.
ಅಕ್ಟೋಬರ್ 30ರಂದು ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ತೀವ್ರ ಕೂತುಹಲ ಕೇರಳಿಸಿದೆ.