ಮೈಸೂರು: ರಸಗೊಬ್ಬರ ಕೊರತೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಒಂದು ವಾರದೊಳಗೆ ಬೇಡಿಕೆಗೆ ತಕ್ಕಷ್ಟು ಯೂರಿಯಾವನ್ನು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಶುಕ್ರವಾರ ಕೃಷಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಸಗೊಬ್ಬರ ಸಂಬಂಧ ಜಿಲ್ಲೆಯ ಕೃಷಿ ಇಲಾಖಾಧಿಕಾರಿಗಳ ಸಭೆಯಲ್ಲಿ ಮಾಹಿತಿ ಪಡೆಯಲಾಗಿದೆ. ಜಿಲ್ಲೆಯಲ್ಲಿ ಗೊಬ್ಬರದ ಸಮಸ್ಯೆ ಸ್ವಲ್ಪ ಕಂಡುಬಂದಿದೆ. ಇಂದು 450 ಮೆಟ್ರಿಕ್ ಟನ್ ಗೊಬ್ಬರ ಬಂದಿದ್ದು, 500 ಮೆಟ್ರಿಕ್ ಟನ್ ಯೂರಿಯಾ ರಸ ಗೊಬ್ಬರ ನಾಳೆ ಬರಲಿದೆ. ಅಕ್ಟೋಬರ್ 18 ರಂದು 1300 ಮೆಟ್ರಿಕ್ ಟನ್ ಹಾಗೂ ಅಕ್ಟೋಬರ್ 21ರಂದು 2900 ಮೆಟ್ರಿಕ್ ಟನ್ ರಸಗೊಬ್ಬರ ಬರಲಿದ್ದು, ಯೂರಿಯಾ ರಸಗೊಬ್ಬರದ ಬೇಡಿಕೆ ಕೊರತೆ ನೀಗಲಿದೆ ಎಂದರು.
ಇನ್ನೂ ರಾಜ್ಯದಲ್ಲಿ ಬೆಳೆ ಸಮೀಕ್ಷೆ 99.02 ಸಮೀಕ್ಷೆ ಪೂರ್ಣ ಆಗಿದೆ. ರೈತರಿಂದಲೇ ಸ್ವಯಂ ಪ್ರೇರಿತವಾಗಿ 2ಕೋಟಿ 9 ಲಕ್ಷ ವ್ಯಾಪ್ತಿ ಸರ್ವೆ ಆಗಿದ್ದು, ಇನ್ನೂ ಒಂದು ಲಕ್ಷದಲ್ಲಿ ಮಾತ್ರ ಬಾಕಿ ಇದೆ. ಅದನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ಉತ್ತರ ಕರ್ನಾಟಕ, ಗುಲ್ಬರ್ಗ, ಯಾದವಗಿರಿ, ಬೆಳಗಾಂನಲ್ಲಿ ಅತಿಹೆಚ್ಚು ಬೆಳೆ ಹಾನಿಯಾಗಿದೆ ಎಂದು ಹೇಳಿದರು.
ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದಾಗಿರುವ ಬೆಳೆ ಹಾನಿ ಕುರಿತು ಪ್ರತಿಕ್ರಿಯಿಸಿ, ಬೆಳೆಹಾನಿಗೆ ಸಂಬಂಧಿಸಿದಂತೆ ಆಯಾಯ ಜಿಲ್ಲಾ ಅಧಿಕಾರಿಗಳ ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆಯುತ್ತಿದೆ. ಕಳೆದ ವರ್ಷ ಬೆಳೆಹಾನಿಗೆ ಇಂದು 36.57 ಕೋಟಿ ರೂ. ಬಿಡುಗಡೆಯಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ 800 ಕೋಟಿ ರೂ. ಇದ್ದು, ಎಲ್ಲಿ ಬೆಳೆ ಹಾನಿಯಾಗುತ್ತಿದೆಯೋ ಅಲ್ಲಿ ಬೇಗನೆ ಸರ್ವೇ ನಡೆಸಿ ಪರಿಹಾರ ನೀಡುವಂತೆ ಆದೇಶ ಮಾಡಲಾಗಿದೆ ಎಂದು ತಿಳಿಸಿದರು.