ವಿಜಯಪಥ ಸಮಗ್ರ ಸುದ್ದಿ
ಕೋಲ್ಕತಾ: ದೇಶದಲ್ಲಿ ನಾಲ್ಕು ಪ್ರತ್ಯೇಕ ರಾಷ್ಟ್ರ ರಾಜಧಾನಿಗಳನ್ನು ನಿರ್ಮಿಸಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.
ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆಯ ದಿನದಂದು ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ದೀದಿ, ಕೋಲ್ಕತಾ ಸೇರಿ ಸರದಿಯಂತೆ ದೇಶಕ್ಕೆ ನಾಲ್ಕು ರಾಷ್ಟ್ರ ರಾಜಧಾನಿಗಳನ್ನು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಜನವರಿ 23 ಅನ್ನು ಪರಾಕ್ರಮ್ ದಿವಸ್ (ಶೌರ್ಯ ದಿನ) ಎಂದು ಆಚರಿಸುವ ಕೇಂದ್ರದ ಏಕಪಕ್ಷೀಯ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಇದು ಒಂದು ರೀತಿಯ ಸರ್ವಧಿಕಾರದ ಧೋರಣೆ ಎಂದು ಅಭಿಪ್ರಾಯಪಟ್ಟಿದ್ದಾರೆ.
“ಬ್ರಿಟಿಷರು ಕೋಲ್ಕತಾದಿಂದ ಇಡೀ ದೇಶವನ್ನು ಆಳಿದರು. ಈ ನಮ್ಮ ದೇಶದಲ್ಲಿ ಒಂದೇ ರಾಜಧಾನಿ ಏಕೆ ಇರಬೇಕು? ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮದಲ್ಲಿ ನಾಲ್ಕು ರಾಷ್ಟ್ರೀಯ ರಾಜಧಾನಿಗಳು ಏಕೆ ಇರಬಾರದು? ದೇಶದಲ್ಲಿ ನಾಲ್ಕು ರಾಷ್ಟ್ರ ರಾಜಧಾನಿಗಳನ್ನು ಮಾಡಬೇಕು ಮತ್ತು ಸರದಿಯಂತೆ ನಾಲ್ಕು ಸಂಸತ್ ಅಧಿವೇಶನಗಳನ್ನು ನಡೆಸಲು ಏಕೆ ಸಾಧ್ಯವಿಲ್ಲ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ದೇಶದಲ್ಲಿ ನಾಲ್ಕು ಸಂಸತ್ ಭವನಗಳ ನಿರ್ಮಾಣಕ್ಕೆ ಸಂಸತ್ತಿನಲ್ಲಿ ಒತ್ತಾಯಿಸುವಂತೆ ಇದೇ ವೇಳೆ ತಮ್ಮ ಪಕ್ಷದ ಸಂಸದರಿಗೆ ದೀದಿ ಸೂಚನೆ ನೀಡಿದರು.