ಬೆಂಗಳೂರು: ಸಾರಿಗೆ ನೌಕರರು ಈ ಹಿಂದೆ ಇಟ್ಟಿದ್ದ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದ್ದ ಸರ್ಕಾರ ಮತ್ತು ಸಾರಿಗೆ ಸಚಿವರು ಈವರೆಗೂ ಅವುಗಳನ್ನು ಕಾನೂನಾತ್ಮಕವಾಗಿ ಜಾರಿಗೊಳಿಸಿಲ್ಲ ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುರುವಾರ ನಗರದ ಪ್ರಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 14 ಡಿಸೆಂಬರ್ 2020ರಿಂದ ಈವರೆಗೂ ಬೇಡಿಕೆ ಈಡೇರಿಲ್ಲ. 75ದಿನಗಳು ಕಳೆದರೂ ಸರ್ಕಾರ ಸಾರಿಗೆ ನೌಕರರ ಒಂದೇಒಂದು ಬೇಡಿಕೆಯನ್ನು ಈಡೇರಿಸಿಲ್ಲ ಎಂದು ಕಿಡಿಕಾರಿದರು.
ಕಳೆದ ಡಿಸೆಂಬರ್ ನಲ್ಲಿ ಸಾರಿಗೆ ನೌಕರರು ನಡೆಸಿದ ಧರಣಿ ವೇಳೆ ಸರ್ಕಾರ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವುದನ್ನು ಬಿಟ್ಟು ಉಳಿದ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತ ಭರವಸೆ ನೀಡಿತ್ತು. ಅವುಗಳಲ್ಲಿ ಈಗ 5 ಬೇಡಿಕೆಗಳನ್ನು ಈಡೇರಿಸಿದ್ದೇವೆ ಎಂದು ಹೇಳುತ್ತಿದೆ. ಆದರೆ ಆ ಬೇಡಿಕಗಳು ಇನ್ನೂ ಕಾನೂನಾತ್ಮಕವಾಗಿ ಜಾರಿಗೆ ಬಂದಿಲ್ಲ. ಹೀಗಾಗಿ ನಾವು ಕೇಳಿದ ಯಾವುದೇ ಪ್ರಮುಖ ಬೇಡಿಕೆಗಳನ್ನು ಇದುವರೆಗೂ ಈಡೇರಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ನೆರೆಯ ಆಂಧ್ರಪ್ರದೇಶದಲ್ಲಿ ಸಾರಿಗೆ ನೌಕರರ ಮೂಲ ವೇತನ ಹೆಚ್ಚಿದೆ. ಆದರೆ ನಮ್ಮಲ್ಲಿ ಮೂಲ ವೇತನ ಶೇ. 80ರಷ್ಟು ಕಡಿಮೆ ಇದೆ. ಇನ್ನು 6ನೇ ವೇತನ ಆಯೋಗ ಸಾರಿಗೆ ನೌಕರರಿಗೂ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಈಡೇರಿಸಿಲ್ಲ. ವೇತನ ಪರಿಷ್ಕರಣೆ ಅಗ್ರಿಮೆಂಟ್ ಬಿಟ್ಟುಬಿಡಿ. ವೇತನ ಆಯೋಗ ಶಿಫಾರಸು ಮಾಡಿ ಎಂದು ಆಗ್ರಹಿಸಿದರು.
ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳು
* 6ನೇ ವೇತನ ಆಯೋಗ ಶಿಫಾರಸು ಜಾರಿ ಮಾಡಿ ಅದನ್ನು ನಾಲ್ಕು ನಿಗಮಗಳ ಸಾರಿಗೆ ನೌಕರರಿಗೆ ವಿಸ್ತರಿಸಬೇಕು.
* ಸರ್ಕಾರಿ ನೌಕರರಿಗೆ ಇರುವಂತಹ ಜ್ಯೋತಿ ಸಂಜೀವಿನ ಆರೋಗ್ಯ ಭಾಗ್ಯ ನಮಗೂ ಅನ್ವಯವಾಗುಂತೆ ಮಾಡಲಾಗುವುದು ಎಂದು ಬೇಡಿಕೆ ಇನ್ನು ನನೆಗುದಿಗೆ ಬಿದ್ದಿದೆ.
* ಸಾರಿಗೆ ನೌಕರರಿಗೆ ಸರ್ಕಾರಿ ಶಿಕ್ಷಕರಂತೆ ಅಂತರ ನಿಗಮ ವರ್ಗಾವಣೆ ಪದ್ಧತಿ ಜಾರಿಗೆ ತರುವ ಬೇಡಿಕೆ ಇನ್ನೂ ಈಡೇರಿಲ್ಲ. 75 ದಿನಗಳು ಕಳೆದು ಆ ಬಗ್ಗೆ ಯಾರು ನಮ್ಮ ಬಳಿ ಚರ್ಚಿಸಿಲ್ಲ. ಅದು ಏನಾಯಿತು?
* ಡಿಪೋಗಳಲ್ಲಿ ಮೇಲಾಧಿಕಾರಿಗಳಿಂದ ನೌಕರರಿಗೆ ನೀಡುತ್ತಿರುವ ಕಿರುಕುಳ ಅಲ್ಲಲ್ಲಿ ನಡೆಯುತ್ತಲೇ ಇವೆ. ಬಾಟ, ಭತ್ಯೆ ಮತ್ತು ಓಟಿ ನೀಡುವಂತೆ ಕೇಳಿದ ಬೇಡಿಕೆ ಇನ್ನೂ ಈಡೇರಿಲ್ಲ.
*ಎನ್‌ಐಎನ್‌ಸಿ ಪದ್ಧತಿ ರದ್ದು ಮಾಡುವಂತೆ ಬೇಡಿಕೆ ಇಟ್ಟಿದ್ದು ಇದುವರೆಗೂ ಏನಾಯಿತು ಅನ್ನೋದೆ ತಿಳಿದಿಲ್ಲ?
*ಎಚ್ಆರ್ ಎಂಎಸ್ ಪದ್ಧತಿ ಜಾರಿ ಮಾಡುವುದಾಗಿ ಹೇಳಿದ ಭರವಸೆ ಇನ್ನೂ ಈಡೇರಿಲ್ಲ
* ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ನೌಕರರಿಗೆ 30 ಲಕ್ಷ ರೂ. ನೀಡುವುದಾಗಿ ತಿಳಿಸಿದ್ದು ಇನ್ನು ಮೃತರ ಕುಟುಂಬದವರಿಗೆ ಸಿಕ್ಕಿಲ್ಲ. ಅದು ಎಲ್ಲಿ ಹೋಯಿತು
*ಸಾರಿಗೆ ಸಂಸ್ಥೆಗಳಲ್ಲಿ ಜಾರಿಯಲ್ಲಿರುವ ಎರಡು ವರ್ಷ ತರಬೇತಿ ಅವಧಿಯನ್ನು ಒಂದು ವರ್ಷಕ್ಕೆ ಕಡಿತ ಮಾಡುವ ಬೇಡಿಕೆ ಇನ್ನೂ ಈಡೇರಿಲ್ಲ
ಈ ಎಲ್ಲಾ ಬೇಡಿಕೆಗಳು ಎಲ್ಲಿ ಹೋದವು ಏನಾದರೂ ಎಂಬ ಬಗ್ಗೆ ಇದುವರೆಗೂ ಸಾರಿಗೆ ಅಧಿಕಾರಿಗಳಾಗಲಿ ಅಥವಾ ಸಚಿವರಾಗಲಿ ಸ್ಪಷ್ಟನೆ ನೀಡಿಲ್ಲ. ಮಾಧ್ಯಮಗಳ ಮುಂದೆ ಬಂದು ಮಾತ್ರ ನಾವು 5 ಬೇಡಿಕೆಗಳನ್ನು ಈಡೇರಿಸಿದ್ದೇವೆ. ಇನ್ನು ಉಳಿದ 4 ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸುತ್ತೇವೆ ಎಂದು ಸಚಿವರು ಹೇಳಿಕೆ ನೀಡುತ್ತಿದ್ದಾರೆ. ಆದರೆ ಯಾವ ಬೇಡಿಕಗಳನ್ನು ಇನ್ನು ಈಡೇರಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ತರಾಟೆಗೆ ತೆಗೆದುಕೊಂಡರು.
ಇನ್ನೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೋಡಿಹಳ್ಳಿ ಅವರು ಈ ಹಿಂದೆ ನನ್ನ ಜತೆ ಸಚಿವರು ಮಾತನಾಡಿಲ್ಲ. ಸಾರಿಗೆ ಒಕ್ಕೂಟದ ಮುಖಂಡರ ಜತೆ ಮಾತನಾಡಿ ಭರವಸೆ ನೀಡಿದ್ದಾರೆ. ಈಗಲೂ ಸಚಿವರು ನಮ್ಮ ಜತೆ ಮಾತನಾಡುವುದು ಬೇಡ. ಆದರೆ ಸಮಸ್ಯೆ ಬಗೆಹರಿಸಲಿ ಎಂದರು.
ಸಾರಿಗೆ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ ವರ್ಷ ಡಿಸೆಂಬರ್ 10ರಿಂದ 13ರವರೆಗೆ ಬೃಹತ್ ಪ್ರತಿಭಟನೆ ನಡೆಸಿದ್ದರು ಇದರಿಂದಾಗಿ ಸಾರಿಗೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಇದರಿಂದ ಸಾರ್ವಜನಿಕರು ಪರದಾಡುವಂತಾಗಿತ್ತು. ಬಳಿಕ ಸರ್ಕಾರ ನೌಕರರ ಬೇಡಿಕೆಗಳನ್ನು ಮೂರು ತಿಂಗಳೊಳಗೆ ಈಡೇರಿಸುವುದಾಗಿ ಭರವಸೆ ನೀಡಿತ್ತು.
ಹೀಗಾಗಿ ಸರ್ಕಾರಕ್ಕೆ ಕೊಟ್ಟಿದ್ದ ಮೂರು ತಿಂಗಳ ಗಡುವು ಇನ್ನು 15 ದಿನಗಳಲ್ಲಿ ಮುಗಿಯಲ್ಲಿದ್ದು, ಇರುವ ಈ 15 ದಿನಗಳಲ್ಲಿ ನಮ್ಮ ಬೇಡಿಕೆಗಳು ಈಡೇರದಿದ್ದರೆ ಮತ್ತೆ ನಾವು ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡು ನಮ್ಮ ಬೇಡಿಕೆಗಳು ಈಡೇರುವವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನು ಇಂದು ಸರ್ಕಾರಕ್ಕೆ ನೀಡಿದರು.