ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಈ ಅಧಿವೇಶನ ಕೊನೆಯ ಅಧಿವೇಶನವೇ? ಹೌದು ಎಂಬ ಗುಸುಗುಸು ರಾಜಕೀಯವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ.
ಅದಕ್ಕೆ ಇಂಬು ನೀಡುವಂತೆ ಮೊನ್ನೆ ಬಿಜೆಪಿ ಹೈ ಕಮಾಂಡ್ ಭೇಟಿ ಮಾಡಿ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಲು ಹೋದ ಬಿಎಸ್‌ವೈ ಅವರಿಗೆ ನಾಯಕತ್ವ ಬಿಟ್ಟುಕೊಡಲು ಗಡುವು ನೀಡಿದೆ ಎಂಬ ವಿಚಾರವಾಗಿ ಈಗ ಬಿಸಿಬಿಸಿ ಚರ್ಚೆಯ ವಿಷವಾಗಿದೆ.
ಇನ್ನು ಬಿಎಸ್‌ವೈ ಅವರು ದಿಲ್ಲಿ ಭೇಟಿ ವೇಳೆ ಸಂಪುಟ ವಿಸ್ತರಣೆ ಮಾಡುವುದಕ್ಕೆ ಹೈಕಮಾಂಡ್‌ನಿಂದ ಒಪ್ಪಿಗೆ ಪಡೆಯಲಾರದೇ ಹಿಂತಿರುಗಿರುವುದು ಈಗ ಗುಟ್ಟಾಗೇನು ಉಳಿದಿಲ್ಲ. ಹೀಗಾಗಿ ಯಡಿಯೂರಪ್ಪ ಅವರಿಗೆ ಸಿಎಂ ಆಗಿ ಇದೇ ಕೊನೆಯ ಅಧಿವೇಶನವಾಗುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ಬಲವಾಗಿ ಹೇಳುತ್ತಿವೆ.
ಅಲ್ಲದೇ ಅದಕ್ಕೆ ಒತ್ತು ನೀಡುವಂತೆ ಅಕ್ಟೋಬರ್ 6ರ ಹೊತ್ತಿಗೆ ನಾಯಕತ್ವ ಬದಲಾವಣೆ ಸಂಬಂಧ ತಮ್ಮ ಒಪ್ಪಿಗೆ ಸೂಚಿಸುವಂತೆ ಹೈಕಮಾಂಡ್ ಮುಖ್ಯಮಂತ್ರಿ ಅವರಿಗೆ ಸೂಚನೆ ನೀಡಿದ್ದು, ಅದಕ್ಕೆ ಯಾವರೀತಿ ಜವಾಬು ನೀಡಬೇಕು ಎಂಬುದು ತಿಳಿಯದೆ, ಸುದ್ದಿಗಾರರ ಎದುರು ತಮ್ಮ ಪ್ರಸ್ತುತ ಸ್ಥಿತಿಯನ್ನು ಹೇಳಿಕೊಳ್ಳಲಾಗದೆ ವಾಪಸ್ ರಾಜ್ಯಕ್ಕೆ ಬಂದ ವಿಷಯ ಸದ್ಯದ ಚರ್ಚೆಗೆ ಇನ್ನಷ್ಟು ಬಲ ನೀಡುತ್ತಿದೆ.
ನಾಯಕತ್ವ ತ್ಯಾಗಕ್ಕೆ ಬಿಎಸ್‌ವೈ ಕನಿಷ್ಠ ಮುಂದಿನ ವರ್ಷದ ಬಜೆಟ್‌ವರೆಗೆ ಸಮಯಾವಕಾಶ ಕೋರಿದ್ದರಾದರೂ ಅದನ್ನು ಪೂರೈಸಲು ಬಿಜೆಪಿಯ ದಿಲ್ಲಿ ಪ್ರಭುಗಳು ಮನಸ್ಸು ಮಾಡಿದಂತಿಲ್ಲ ಎನ್ನುತ್ತವೆ ಪಕ್ಷದ ಮೂಲಗಳು. ಆದರೂ ಸಿಎಂ ಅವರ ಕೋರಿಗೆ ಈಡೇರಿಸುವಂತೆ ಪಕ್ಷದ ಹೈಕಮಾಂಡ್ ಮೇಲೆ ರಾಜ್ಯದ ಕೆಲವು ಆರ್‌ಎಸ್‌ಎಸ್ ಮುಖಂಡರು ತೆರೆ ಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಒಟ್ಟಿನಲ್ಲಿ ಸಂಸತ್ತಿನ ಅಧಿವೇಶನ ಮುಗಿದ ನಂತರ ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಗೆರಿಗೆದರುವುದು ನಿಶ್ಚಿತ ಎಂಬುವುದು ಬಿಎಸ್‌ವೈ ವಿರೋಧಿ ಪಾಳೆಯದ ಲೆಕ್ಕಾಚಾರವಾಗಿದೆ. ಅಲ್ಲದೆ ಈ ವಿರೋಧಿ ಬಣ ತಮ್ಮ ಅಧಿಪತ್ಯ ಸಾಧಿಸಲು ಈಗಾಗಲೇ ಸಿದ್ಧತೆಯನ್ನು ಮಾಡಿಕೊಂಡಿದೆ ಎಂಬ ಮಾತು ಸಹ ರಾಜಕೀಯ ಮೊಗಸಾಲೆಯಲ್ಲಿ ಗುನುಗುತ್ತಿದೆ.
ಒಟ್ಟಿನಲ್ಲಿ ಈ ಅಧಿವೇಶನ ಬಿಎಸ್‌ವೈ ಅವರಿಗೆ ಕೊನೆಯಾದರೆ ಪರ ವಿರೋಧದ ಅಲ್ಲೆಯಲ್ಲಿ ರಾಜ್ಯದಲ್ಲಿ ಪಕ್ಷ ಬಲಗೊಳ್ಳುವುದೇ ಅಥವಾ ಕ್ಷೀಣಿಸುವುದೇ ಎಂಬ ಲೆಕ್ಕಚಾರದಲ್ಲಿ ವಿಕ್ಷಗಳು ತೊಡಗಿವೆ.