ಬೆಳಗಾವಿ: ಕೋವಿಡ್‌ನಿಂದ ನ್ಯೂಡೆಲ್ಲಿಯ ಏಮ್ಸ್ ಅಸ್ಪತ್ರೆಯಲ್ಲಿ ಬುಧವಾರ ನಿಧನರಾದ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಅಂತ್ಯಕ್ರಿಯೆಯನ್ನು ನ್ಯೂಡೆಲ್ಲಿಯಲ್ಲೇ ನಡೆಸಲು ನಿರ್ಧರಿಸಲಾಗಿದೆ.
ನ್ಯೂಡೆಲ್ಲಿಯಲ್ಲಿ ಮೃತರಾಗಿರುವ ಸಚಿವರ ದೇಹವನ್ನು ಬೆಳಗಾವಿಗೆ ತರಲು ಈಗ ಕೊರೊನಾ ನಿಯಮಗಳು ಅಡ್ಡಿಯಾಗಿದೆ. ಸೋಂಕಿತರು ಎಲ್ಲಿ ಮೃತಪಡುತ್ತಾರೋ ಅಲ್ಲಿಯೇ ಅಂತ್ಯ ಸಂಸ್ಕಾರ ಮಾಡಬೇಕು ಎಂಬ ನಿಯಮವಿರುವ ಹಿನ್ನೆಲೆ ಅವರ ಮೃತದೇಹವನ್ನು ಹುಟ್ಟೂರಿಗೆ ಸಾಗಿಸಲು ಅಡ್ಡಿಯಾಗಿದೆ.
ಪಾರ್ಥಿವ ಶರೀರವನ್ನು ಬೆಳಗಾವಿಗೆ ತರುವುದಕ್ಕೆ ರಾಜ್ಯ ಸರ್ಕಾರದಿಂದಲೂ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ, ಕೋವಿಡ್ ನಿಯಮಾವಳಿ ಪ್ರಕಾರ ಪಾರ್ಥಿವ ಶರೀರವನ್ನು ಬೆಳಗಾವಿಗೆ ತರಲು ಅವಕಾಶ ಆಗುತ್ತಿಲ್ಲ ಎಂದು ತಿಳಿದುಬಂದಿದೆ.
ಪಾರ್ಥಿವ ಶರೀರವನ್ನು ಕೊಂಡೊಯ್ಯವುದಕ್ಕೆ ಏಮ್ಸ್ ವೈದ್ಯರು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೇ ಈ ಕುರಿತು ಪಿಯೂಷ್ ಗೋಯೆಲ್ ಕೂಡ ನಿಬಂಧನೆ ಸಡಿಲಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆ ಈ ಕುರಿತು ಕುಟುಂಬ ವರ್ಗ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ. ಆದರೆ, ಇದು ಫಲಪ್ರದವಾಗದ ಹಿನ್ನೆಲೆ ಅಂತ್ಯಕ್ರಿಯೆ ನ್ಯೂಡೆಲ್ಲಿಯಲ್ಲೇ ನಡೆಯಲಿದೆ. ನ್ಯೂಡೆಲ್ಲಿಯ ಲೋಧಿ ಎಸ್ಟೇಟ್ನ ಚಿತಾಗಾರದಲ್ಲಿ ನೆರವೇರಿಸಲಾಗುವುದು. ಹೀಗಾಗಿ ಸಂಬಂಧಿಕರಿಗೆ ನ್ಯೂಡೆಲ್ಲಿಗೆ ಬರಲು ಸೂಚಿಸಲಾಗಿದೆ.