ನ್ಯೂಡೆಲ್ಲಿ: ಭಾರತೀಯ ಜನತಾ ಪಕ್ಷದ ಬೆಳಗಾವಿಯ ನಾಯಕ ಹಾಗೂ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ (65) ಇಂದು ನಿಧನ ಹೊಂದಿದ್ದಾರೆ.
ಸಂಸದ ಸುರೇಶ್ ಅಂಗಡಿ ಅವರಿಗೆ ಕಳೆದ ವಾರ ಕೋವಿಡ್ ಸೋಂಕು ತಗಲಿತ್ತು. ಯಾವುದೇ ರೋಗ ಲಕ್ಷಣ ಇಲ್ಲದೇ ಇದ್ದರೂ ಅವರು ವೈದ್ಯರ ಸಲಹೆ ಮೇರೆಗೆ ನ್ಯೂಡೆಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಕೋವಿಡ್ ಸೋಂಕಿನ ಕಾರಣದಿಂದ ಅಂಗಡಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಸಾಯಂಕಾಲ ಮೃತಪಟ್ಟಿದ್ದಾರೆ.
ಸುರೇಶ್ ಅಂಗಡಿ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ 2004, 2009, 2014 ಮತ್ತು 2019ರಲ್ಲಿ ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.
ಸಂಸತ್ ಅಧಿವೇಶನಕ್ಕೂ ಮುನ್ನ ಎಲ್ಲಾ ಸಂಸದರಿಗೂ ಕೋವಿಡ್ 19 ಸೋಂಕು ಪತ್ತೆ ಪರೀಕ್ಷೆಯನ್ನು ನಡೆಸಲಾಗಿತ್ತು. ಅದರಲ್ಲಿ ಅಂಗಡಿ ಅವರಿಗೆ ಸೋಂಕು ಪಾಸಿಟಿವ್ ಕಾಣಿಸಿಕೊಂಡಿತ್ತು. ಶ್ವಾಸಕೋಶದ ಸೋಂಕಿಗೆ ಗುರಿಯಾಗಿದ್ದ ಸುರೇಶ್ ಅಂಗಡಿ ಅವರನ್ನು ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು.
ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಸುರೇಶ್ ಅಂಗಡಿಯವರು ವಾಣಿಜ್ಯೋದ್ಯಮಿಗಳು ಹೌದು. ಇಬ್ಬರು ಪುತ್ರಿಯರು ಸೇರಿ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಅಂಗಡಿಯವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.