ಬೆಂಗಳೂರು: ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಜನ್ಮದಿನವನ್ನು ಬೆಂಗಳೂರಿನ ಪ್ಯಾಲೇಸ್ ಗುಟ್ಟಳ್ಳಿ ರಾಜಬೀದಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಕನ್ನಡಪರ ಹೋರಾಟಗಾರ, ಡಾ.ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ರಾಜೀವ ನಾಣಿ ಹಾಗೂ ಭಾರತೀಯ ಜನತಾ ಪಕ್ಷದ ಯುವ ಮುಖಂಡ ಪ್ರಸನ್ನ ರಾಜು, ಚಾಲಕರ ಸಂಘದ ಪದಾಧಿಕಾರಿ ಚೆಲುವರಾಜು ಸೇರಿ ಮೊದಲಾದ ಪ್ರಮುಖರು ಅರಸು ಸ್ಮರಣೆ ಕಾರ್ಯಕ್ರಮ ಆಯೋಜಿಸಿದ್ದರು.
ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಆರ್. ವೆಂಕಟರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧೀಜಿಯವರು ರಾಷ್ಟ್ರಮಟ್ಟದಲ್ಲಿ ನಿರ್ಲಕ್ಷಕ್ಕೆ ಒಳಗಾದಾಗ ಅರಸು ಅವರು ಇಂದಿರಾ ಗಾಂಧೀಜಿ ಅವರಿಗೆ ಪುನರ್ ರಾಜಕೀಯ ಆಶ್ರಯ ಕಲ್ಪಿಸಿ ದರಲ್ಲದೆ, ಉಳುವವನೆ ನೆಲದೊಡೆಯ ಎಂಬ ಭೂಸುಧಾರಣೆ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿಗಳಾಗಿ ಜಾರಿಗೆ ತಂದರು ಎಂದು ಸ್ಮರಿಸಿದರು.
ತುಳಿತಕ್ಕೊಳಗಾದ ಸಮುದಾಯಗಳಿಗೆ ರಾಜಕೀಯ ಧ್ವನಿ ನೀಡಿದ ಅರಸು ಅವರು ತದನಂತರ ಗಳಲ್ಲಿ ನಿರ್ಲಕ್ಷಕ್ಕೆ ಒಳಗಾಗಿದ್ದು ಶೋಷಣೆಯ ವಿಚಾರ. ಸಾಮಾಜಿಕ ನ್ಯಾಯಕ್ಕೆ ಆದ ಹಿನ್ನಡೆ. ಹಿಂದಿನ ಕಾಂಗ್ರೆಸ್ ಸರ್ಕಾರ ಅವರ ಹೆಸರಿನಲ್ಲಿ ಚಲನಚಿತ್ರ ನಿರ್ಮಿಸುವುದಾಗಿ ಹೇಳಿ, ಯೋಜನೆಯನ್ನು ಕೈಬಿಟ್ಟು ಅಪಮಾನ ಮಾಡಿದ್ದು ಬೇಸರದ ಸಂಗತಿ ಎಂದು ನೊಂದು ನುಡಿದರು.
ಈಗಿನ ಸರ್ಕಾರವಾದರೂ ದೇವರಾಜ ಅರಸು ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವುದನ್ನು ಮುಂದುವರಿಸುವುದು, ಚಲನಚಿತ್ರ ನಿರ್ಮಿಸಿ, ಅವರ ಹೆಸರನ್ನು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ ಇಟ್ಟು ಗೌರವಿಸಬೇಕಾಗಿದೆ ಎಂದರು.
ಕೊರೊನಾದ ಕಾರಣ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕಾರ್ಯಕ್ರಮವನ್ನು ಸರಳವಾಗಿ ಯಶಸ್ವಿಯಾಗಿ ನಡೆಸಲಾಯಿತು. ಆರೋಗ್ಯ ಇಲಾಖೆಯ ರಾಜೇಶ್ ಅರಸ್ ವಂದನಾರ್ಪಣೆ ಮಾಡಿದರು. ಸ್ಥಳೀಯ ನಾಗರಿಕರು ಬಡಾವಣೆಯ ಜನರು ಅವರ ಮನೆ ಅಂಗಳದಲ್ಲಿ ನಿಂತು ಅರಸು ಅವರ ಗುಣಗಾನ ಮಾಡಿದರು. ಕಾರ್ಯಕ್ರಮದ ಕೊನೆಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು.