ಬೆಂಗಳೂರು: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಲಾಕ್ ಡೌನ್ ಗೆ ಸರ್ಕಾರ ನಿರ್ಧಾರ ಮಾಡಿರುವ ಬೆನ್ನಲ್ಲೇ ಸರಕು ಸಾಗಣೆ ವಾಹನಗಳನ್ನು ಹೊರತುಪಡಿಸಿ ಅಂತರ್ ಜಿಲ್ಲಾ ಸಂಚಾರವನ್ನು ನಿರ್ಬಂಧಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ಕೊರೊನಾ ವೈರಸ್ ಸಮುದಾಯಕ್ಕೆ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಮನಗಂಡು ಇತರ ಗಂಭೀರ ಜಿಲ್ಲೆಗಳಲ್ಲಿಯೂ ಲಾಕ್ ಡೌನ್ ಮತ್ತೆ ಜಾರಿಗೊಳಿಸಿದರೆ ಸಾರ್ವಜನಿಕ ಸ್ವಾಸ್ಥ್ಯದ ಹಿತದೃಷ್ಟಿಯಿಂದ ನಾನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.
ಇದರ ಜತೆಗೆ ಒಂದು ವರ್ಷ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಹೋದರೆ ಏನು ನಷ್ಟವಾಗುವುದಿಲ್ಲ, ಮೊದಲು ರಾಜ್ಯದ ಜನರ ಆರೋಗ್ಯದ ಕಡೆ ಹೆಚ್ಚಿನ ಗಮನಕೊಡಿ ಅವರು ಆರೋಗ್ಯವಾಗಿದ್ದರೆ ನೀವು ಸುಲಲಿತವಾಗಿ ಸರ್ಕಾರ ನಡೆಸಲು ಸಾಧ್ಯ ಎಂದು ಸಲಹೆ ನೀಡಿದ್ದಾರೆ.
ಈ ಬಗ್ಗೆ ಮಾರ್ಚ್‌ನಲ್ಲೇ ಸಿಎಂ ಬಿಎಸ್‌ವೈ ಅವರಿಗೆ ತಿಳಿಸಿದ್ದೆ ಸರ್ಕಾರದಲ್ಲಿ ಯಾವುದೇ ಹಣದ ಕೊರತೆ ಇಲ್ಲ ಎಂದು ಕೆಲ ಸಚಿವರು ಈಗಲೂ ಹೇಳುತ್ತಿದ್ದಾರೆ. ಕೊರೊನಾ ಸೋಂಕು ನಿವಾರಣೆ ಬಗ್ಗೆ ಕಾಳಜಿವಹಿಸಬೇಕಾದ ಸರ್ಕಾರ ಇಂದು ವಿದೇಶಿ ಬಂಡವಾಳ ಹೂಡಿಕೆದಾರರನ್ನು ಸೆಳೆಯಲು ಯಾರಿಗೋ ಕೋಟಿ ಕೋಟಿ ರೂ. ಕೊಡುವುದಾಗಿ ಘೋಷಿಸಿದೆ.
ಇಂಥ ಸಮಯದಲ್ಲಿ ಇದು ಬೇಕ ಜತೆಗೆ ವಿದೇಶಿ ಬಂಡವಾಳ ಹೂಡಿಕೆ ಮಾಡುವವರನ್ನು ಸೆಳೆಯಬೇಕಾದರೆ ಹೂಡಿಕೆಗೆ ಬೇಕಾದ ಎಲ್ಲರೀತಿಯ ಸೌಲಭ್ಯವನ್ನು ಕಲ್ಪಿಸಿಕೊಡಿ ಅದನ್ನು ಬಿಟ್ಟು ಯಾರಿಗೊ ಕೋಟಿ ಕೋಟಿ ಕೊಟ್ಟು ಬಂಡವಾಳ ಗಾರರ ಸೆಳೆಯುವ ಪ್ರಯತ್ನಯಾಕೆ ಎಂದು ಪ್ರಶ್ನಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಕೊರೊನಾ ಮಹಾಮಾರಿ ಹೆಚ್ಚಾಗುತ್ತಿದ್ದು ಜನರಿಗೆ ಸರಿಯಾದ ಚಿಕಿತ್ಸೆ ಕೊಡುವತ್ತ ಗಮನಕೊಡಬೇಕು ಎಂದು ಒತ್ತಾಯಿಸಿದ್ದಾರೆ.