ಬೆಂಗಳೂರು: ಕೋವಿಡ್-19 ಸೋಂಕಿತರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 ಹಾಸಿಗೆ ಮೀಸಲಿಡಲು ರಾಜ್ಯ ಸರ್ಕಾರ ಆದೇಶಿಸಿದೆ. ಅದರಂತೆ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 ಹಾಸಿಗೆ ಕೋವಿಡ್ ಹಾಗೂ ಶೇ.50 ಸಾಮಾನ್ಯ ರೋಗಿಗಳಿಗೆ ಮೀಸರಿಸಬೇಕೆಂಬ ಸೂಚನೆ ಇದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.
ಪಾಲಿಕೆ ಕೇಂದ್ರ ಕಚೇರಿ ಸಭಾಂಗಣ-01ರಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸಣ್ಣ-ಸಣ್ಣ/ಕಡಿಮೆ ಹಾಸಿಗೆಗಳಿರುವ 5 ರಿಂದ 10 ಆಸ್ಪತ್ರೆಗಳು ಒಟ್ಟಿಗೆ ಬಂದು ಉದಾಹರಣೆಗೆ 200 ಹಾಸಿಗೆಗಳಿದ್ದಲ್ಲಿ ಅದರಲ್ಲಿ ಕೆಲ ಆಸ್ಪತ್ರೆಗಳನ್ನು ಕೋವಿಡ್ ಚಿಕಿತ್ಸೆಗಾಗಿ ಹಾಸಿಗೆಗಳನ್ನು ನೀಡಿ, ಉಳಿದ ಆಸ್ಪತ್ರೆಗಳಲ್ಲಿ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ನೀಡುವಂತೆಯೂ ಸೂಚನೆ ನೀಡಲಾಗಿದೆ ಎಂದರು.
ಪ್ರತಿಯೊಬ್ಬ ಬಡವರಿಗೂ ಹಾಸಿಗೆ ಲಭ್ಯವಾಗಬೇಕು. ಆ ದೃಷ್ಟಿಯಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಂದು ವೇಳೆ ಹಾಸಿಗೆ ಮೀಸಲಿಡದಿದ್ದರೆ ಕಠಿಣವಾದ ಕ್ರಮ ತೆಗೆದುಕೊಳ್ಳುವುದು. ಈಗಾಗಲೇ ಸೇಂಟ್ ಮಾರ್ಥಾಸ್ ಆಸ್ಪತ್ರೆ (ನೃಪತುಂಗ ರಸ್ತೆ), ರಂಗದೋರ್ ಮೆಮೋರಿಯಲ್ ಆಸ್ಪತ್ರೆ (ಶಂಕರಪುರಂ), ಶಿಫಾ ಆಸ್ಪತ್ರೆ(ಕ್ವೀನ್ಸ್ ರಸ್ತೆ) ಹಾಗೂ ಪೋರ್ಟಿಸ್ ಆಸ್ಪತ್ರೆ (ಕನ್ನಿಂಗ್‌ಹ್ಯಾಮ್ ರಸ್ತೆ)ಗಳಿಗೆ ವಿಪತ್ತು ನಿವರ್ಹಣಾ ಕಾಯ್ದೆ ಅಡಿ ದೂರು ದಾಖಲಿಸಲು ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದರು.