ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜುಲೈ 31 ಆಚರಿಸಲಿರುವ ವರಮಹಾಲಕ್ಷ್ಮೀ ಹಬ್ಬ ಹಾಗೂ ಆಗಸ್ಟ್ 1 ರಂದು ನಡೆಯುವ ಬಕ್ರಿದ್ ಹಬ್ಬವನ್ನು ಗುಂಪು ಸೇರದೆ ಸರಳವಾಗಿ ಆಚರಣೆ ಮಾಡುವಂತೆ ಬಿಬಿಎಫಿ ಆಯುಕ್ತ ಮಂಜುನಾಥ್ ಪ್ರಸಾದ್ ಮನವಿ ಮಾಡಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಹಬ್ಬವನ್ನು ಆದಷ್ಟು ಮನೆಯಲ್ಲೇ ಸರಳವಾಗಿ ಆಚರಣೆ ಮಾಡಿ. ವರಮಹಾಲಕ್ಷ್ಮೀ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ಬದಲು, ಮನೆಯಲ್ಲಿರುವ ಸಾಮಗ್ರಿಗಳಿಂದಲೇ ಸರಳವಾಗಿ ಆಚರಿಸಿ. ಮನೆ ಮನೆ ಭೇಟಿ ನೀಡದೇ ಇರುವುದು ಸೂಕ್ತ.
ಹಬ್ಬದ ದಿನ ದೇವಸ್ಥಾನ/ಮಂದಿರ ಹಾಗೂ ಮಸೀದಿಗೆ ಹೋಗುವ ಬದಲು ಮನೆಯಲ್ಲೇ ಆಚರಣೆ ಮಾಡಿಕೊಳ್ಳುವುದು ಸೂಕ್ತ. ಆ ಬಗ್ಗೆ ನಿಮ್ಮ ಸಂಬಂಧಿಕರು ಹಾಗೂ ಪರಿಚಯಸ್ಥರಿಗೆ ಅರಿವು ಮೂಡಿಸಿ.
ಹಬ್ಬದ ದಿನ ಸಂಬಂಧಿಕರು ಹಾಗೂ ಸ್ನೇಹಿತರನ್ನು ಮನೆಗೆ ಆಹ್ವಾನಿಸದಿರಿ. ಅನಿವಾರ್ಯ ಕಾರಣಗಳಿಂದ ಮನೆಯಿಂದ ಹೊರ ಹೋಗಬೇಕಾದರೆ ತಪ್ಪದೆ ಸುರಕ್ಷಾ ಕ್ರಮಗಳನ್ನು ಪಾಲನೆ ಮಾಡಿ. ಅನಗತ್ಯವಾಗಿ ಬೇರೆಡೆ ಹೋಗುವುದನ್ನು ನಿಲ್ಲಿಸಿ.
ಸುರಕ್ಷತಾ ದೃಷ್ಟಿಯಿಂದ ಎಲ್ಲಾ ನಾಗರಿಕರು ಚಾಚುತಪ್ಪದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್(ಮುಖಗವಸು) ಧರಿಸುವುದು ಹಾಗೂ ಆಗಿಂದಾಗ್ಗೆ ಸೋಪಿನಿಂದ/ ಸ್ಯಾನಿಟೈಸರ್‌ನಿಂದ ಕೈತೊಳೆಯುವುದನ್ನು ಮರೆಯದಿರಿ.
ಹೆಚ್ಚು ಜನ ಗುಂಪು ಸೇರುವುದರಿಂದ ಕೊರೊನಾ ಹರಡುವ ಆತಂಕ ಇದೆ. ಆದ್ದರಿಂದ ನಿಮ್ಮ ಜವಾಬ್ದಾರಿಯನ್ನು ಅರಿತು, ಯಾರೊಬ್ಬರಿಗೂ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ.
ಕೊರೊನಾ ತುರ್ತು ಪರಿಸ್ಥಿತಿಯಲ್ಲಿ ಜನ ಸಹಕಾರ ನೀಡಿದರೆ ಮಾತ್ರ ಕೊರೊನಾ ವಿರುದ್ಧ ಹೋರಾಡಲು ಸಾಧ್ಯ. ಹಬ್ಬದ ದಿನ ಉತ್ಪತ್ತಿಯಾಗುವ ಕಸವನ್ನು ಎಲ್ಲೂ ಬಿಸಾಡದೆ ಬೆಳಗಿನ ಜಾವ ಬರುವ ಒಣ/ಹಸಿ/ಸ್ಯಾನಿಟರಿ ತ್ಯಾಜ್ಯವನ್ನು ವಿಂಗಡಿಸಿ ಪಾಲಿಕೆವತಿಯಿಂದ ತ್ಯಾಜ್ಯ ಸಂಗ್ರಹಿಸುವವರಿಗೆ ನೀಡಬೇಕು ಎಂದು ತಿಳಿಸಿದ್ದಾರೆ.