ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ಟ್ರ್ಯಾಕ್ಟರ್ ಪರೇಡ್ ವೇಳೆ ಕೆಲ ಸಮಾಜ ವಿರೋಧಿ ಶಕ್ತಿಗಳು ಹಿಂಸಾಚಾರಕ್ಕೆ ಕಾರಣವಾಗಿದ್ದು, ಕೆಲವೆಡೆ ಪೊಲೀಸರೊಂದಿಗೆ ಸಂಘರ್ಷ ನಡೆಸಿದ್ದಾರೆ. ಶಾಂತಿಯುತ ಪ್ರತಿಭಟನೆಗೆ ಅಪಖ್ಯಾತಿ ತಂದಿದ್ದಾರೆ ಎಂದು ಅಖಿಲ ಭಾರತ ಕಿಸಾನ್ ಸಭಾ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲಾ ಆರೋಪಿಸಿದ್ದಾರೆ.
ಮಂಗಳವಾರ ನಡೆದ ಹಿಂಸಾಚಾರದ ಬಗ್ಗೆ ರೈತರ ಗುಂಪೊಂದು ಟೀಕಿಸುತ್ತಿರುವ ನಡುವೆ, ನಿಯಮ ಉಲ್ಲಂಘನೆ ಹಾಗೂ ನಿಗದಿಯಾಗದ ಮಾರ್ಗಗಳಲ್ಲಿ ಪರೇಡ್ ನಡೆಯಲು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಗೆ 40 ರೈತ ಒಕ್ಕೂಟಗಳನೊಳಗೊಂಡ ಸಂಯುಕ್ತ ಕಿಸಾನ್ ಮೋರ್ಚಾ ಸೂಚಿಸಿದರೂ ಅದನ್ನು ಲೆಕ್ಕಿಸದೇ ಹೋಗಿದೆ ಎಂದು ದೂಷಿಸಿದೆ.
ಇನ್ನು ಸಮಾಜ ಘಾತುಕ ಶಕ್ತಿಗಳು ಶಾಂತಿಯುತ ಹೋರಾಟದಲ್ಲಿ ನುಸುಳಿವೆ ಎಂದು ಪ್ರತಿಭಟನಾನಿರತ ರೈತ ಮುಖಂಡರು ಆರೋಪಿಸಿದ್ದಾರೆ. ಪರೇಡ್ ವೇಳೆ ಏನು ನಡೆಯಿತು ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಪಡೆಯಲು ಯತ್ನಿಸುತ್ತಿದ್ದು, ನಂತರ ಬಿಡುಗಡೆ ಮಾಡುವುದಾಗಿ ಸಂಯುಕ್ತ ಕಿಸಾನ್ ಮೋರ್ಚ್ ಮುಖಂಡರು ಹೇಳಿದ್ದಾರೆ.
ಕೆಎಂಎಸ್ಸಿ ಪಂಜಾಬಿನ 32 ರೈತ ಒಕ್ಕೂಟಗಳ ಭಾಗವಾಗಿಲ್ಲ, ಆದರೆ, ಅದು ರೈತರ ಸಭೆಗಳಲ್ಲಿ ಪಾಲ್ಗೊಂಡಿತ್ತು. ದೆಹಲಿಗೆ ತೆರಳದಂತೆ ಸಂಯುಕ್ತ ಕಿಸಾನ್ ಮೋರ್ಚಾ ನಾಯಕರು ಹೇಳುತ್ತಿದ್ದನ್ನು ಅವರು ಕೇಳುತ್ತಿರಲಿಲ್ಲ. ಅಲ್ಲದೇ, ದೆಹಲಿ ಪೊಲೀಸರು ಮತ್ತಿತರ ಶಕ್ತಿಗಳು ಕೂಡಾ ರೈತರನ್ನು ಹಾದಿ ತಪ್ಪಿಸಿದ್ದಾರೆ ಎಂದು ಹಿರಿಯ ರೈತ ಮುಖಂಡರೊಬ್ಬರು ಹೇಳಿದ್ದಾರೆ.
2007ರಲ್ಲಿ ಸ್ಥಾಪನೆಯಾಗಿರುವ ಕೆಎಂಎಸ್ ಸಿ ಪಂಜಾಬಿನ ಏಳು ಜಿಲ್ಲೆಗಳನ್ನು ಪ್ರತಿನಿಧಿಸುತ್ತದೆ. ಹಿಂಸಾಚಾರಕ್ಕೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕಾರಣವಾಗಿವೆ ಎಂದು ಹೇಳಿರುವ ಮೋರ್ಚಾ, ಪರೇಡ್ ನಲ್ಲಿ ಅಭೂತಪೂರ್ವ ರೀತಿಯಲ್ಲಿ ಪಾಲ್ಗೊಂಡಿದ್ದ ರೈತರಿಗೆ ಅಭಿನಂದನೆ ಸಲ್ಲಿಸುತ್ತೇವೆ.
ಜತೆಗೆ ಅನರ್ಹ ಹಾಗೂ ಕೆಟ್ಟ ಘಟನೆಗಳನ್ನು ಖಂಡಿಸುತ್ತೇವೆ. ನಮ್ಮ ಪ್ರಯತ್ನದ ಹೊರತಾಗಿಯೂ ಕೆಲ ಸಂಘಟನೆಗಳು ಮತ್ತು ಕೆಲವರು ಮಾರ್ಗವನ್ನು ಉಲ್ಲಂಘಿಸಿ, ಖಂಡನಾರ್ಹಾ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.