ಬೆಂಗಳೂರು: ‘ಆಡು ಮುಟ್ಟದ ಸೊಪ್ಪಿಲ್ಲ, ಬಿಜೆಪಿ ಮಾಡದ ಭ್ರಷ್ಟಾಚಾರ ಕ್ಷೇತ್ರವಿಲ್ಲ’ ಎನ್ನುವುದು ಈಗಿನ ಕಹಿ ವಾಸ್ತವ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೆಂಡಕಾರಿದ್ದಾರೆ.
ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಶಿಕ್ಷಣ ಕ್ಷೇತ್ರಕ್ಕೂ ನುಸುಳಿರುವುದು ನಾಚಿಕೆಗೇಡು. ಮಾನ್ಯತೆ ನವೀಕರಣಕ್ಕೂ ಹಣಕ್ಕಾಗಿ ಕೈಚಾಚುತ್ತಿರುವ ಬಿಜೆಪಿಯು ಆಡಳಿತವೆಂದರೆ ದುಡ್ಡು ಮಾಡುವ ದಂಧೆ ಎಂದು ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ.
ಇನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳ ಮಿತಿ ಮೀರಿದ ಭ್ರಷ್ಟಾಚಾರ, ಕಿರುಕುಳದ ಪರಿಣಾಮ ರಾಜ್ಯದ ಹಲವು ಖಾಸಗಿ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿವೆ ಎಂದು ಆರೋಪಿಸಿ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ರೂಪ್ಸಾ) ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದೆ. ಆ ವರದಿ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.
ಲಂಚ ಕೊಡದೇ ಶಾಲೆಗಳ ಮಾನ್ಯತೆ ನವೀಕರಣ ಮಾಡುತ್ತಿಲ್ಲ. ಆರ್‌ಟಿಇ ಶುಲ್ಕ ಬಿಡುಗಡೆ ಮಾಡಿಲ್ಲ. ಅನ್ಯ ಪಠ್ಯಕ್ರಮ ಅನುಸರಿಸಲು ಎನ್‌ಒಸಿ ಕೊಡುತ್ತಿಲ್ಲ. ದಾಖಲೆಗಳ ಪರಿಶೀಲನೆ ನೆಪದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ, ವಸೂಲಿ ದಂಧೆ ನಡೆಸುತ್ತಿದ್ದಾರೆ. ಸಚಿವರಿಗೆ ನೀಡಿದ ಮನವಿಗಳು ಕಸದ ಬುಟ್ಟಿ ಸೇರಿವೆ ಎಂದು ರೂಪ್ಸಾ ತನ್ನ ಪತ್ರದಲ್ಲಿ ದೂರಿದೆ.
ಅಲ್ಲದೆ ಶಿಕ್ಷಣ ಇಲಾಖೆಯ ಅಧಿಕಾರಿಗಳು 30% – 40% ಲಂಚ ಕೇಳುತ್ತಾರೆ ನಾವು ಎಲ್ಲಿಂದ ತಂದುಕೊಡಬೇಕು, ಇದರ ಬದಲಿಗೆ ಇಲಾಖೆಯನ್ನೇ ಮುಚ್ಚಿಬಿಡಿ ಎಂದು ನೊಂದು ಪ್ರಧಾನಿಯವರಿಗೆ ಮನವಿ ಮಾಡಿದ್ದಾರೆ.