ಹುಬ್ಬಳ್ಳಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಒಕ್ಕೂಟದ ಪದಾಧಿಕಾರಿಗಳು ಹುಬ್ಬಳ್ಳಿಯ ನಗರ ಸಾರಿಗೆ ಘಟಕ 1, ಗ್ರಾಮಾಂತರ ಘಟಕ 1, ಗ್ರಾಮಾಂತರ ಘಟಕ 2ರಲ್ಲಿ ಶನಿವಾರ ನಡೆಸಿದ ದ್ವಾರಸಭೆ ಯಶಸ್ವಿಯಾಯಿತು.
ಇದೇ ಡಿ.31ರಿಂದ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ವತಿಯಿಂದ ಬೆಂಬಲ ಇರುವುದಿಲ್ಲ ಎಂದು ಸಭೆಯಲ್ಲಿ ಸ್ಪಷ್ಟ ಪಡಿಸಲಾಯಿತು.
ಸರ್ಕಾರದ ಮೇಲೆ ವಿಶ್ವಾಸ ಇಟ್ಟಿರುವ ನೌಕರರಾದ ನಾವು ಸರ್ಕಾರಕ್ಕೆ ಯಾವುದೇ ಮುಜುಗರ ಉಂಟು ಮಾಡದೆ ಎಲ್ಲ ಬಸ್ ಕಾರ್ಯಾಚರಣೆ ಮಾಡುತ್ತೇವೆ ಹಾಗೂ ಮುಂದಿನ ದಿನಗಳಲ್ಲಿ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಸರಿ ಸಮಾನ ವೇತನವನ್ನು ನೀಡುತ್ತದೆ ಎಂಬ ಅಪಾರವಾದ ವಿಶ್ವಾಸವಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಇನ್ನು ಅತೀ ಶೀಘ್ರದಲ್ಲೇ ಅದಕ್ಕೆ ಶಾಶ್ವತ ಪರಿಹಾರ ದೊರೆಯಲಿದೆ ಎಂಬ ನಂಬಿಕೆ ತಮಗಿದೆ ಎಂದು ವಾಯವ್ಯ ವಲಯ ನೌಕರರ ಕೂಟದ ಕಾರ್ಯಾಧ್ಯಕ್ಷ ವಿ.ಜಿ. ಪೂಜಾರ ಹೇಳಿದರು. ರಾಜ್ಯ ಮುಖಂಡರಾದ ಕೃಷ್ಣ ಗುಡುಗುಡಿ, ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಅಧ್ಯಕ್ಷ ವಿನಾಯಕ ಕಲ್ಲಣವರ ನೌಕರರ ಕುರಿತು ಮಾತನಾಡಿದರು.
ದ್ವಾರ ಸಭೆಯಲ್ಲಿ ರಾಜ್ಯ ಸಮಿತಿಯ ರಾಜೇಂದ್ರ, ರಮೇಶ್ ವಜ್ರಮಟ್ಟಿ, ವಿಭಾಗದ ಪದಾಧಿಕಾರಿಗಳಾದ ಆರ್.ಎಸ್. ಮಾವಿನಕಾಯಿ, ಎಂ.ಐ. ಮಡಿವಾಳರ, ಇಸಾಕ ಗುಡುವಾಲ, ಎಸ್.ಎಚ್.ಬಟ್ಟುರ, ರಾಜೂರ, ಹುರಳಿ, ವಿ.ಎಸ್.ಪೂಜಾರ ಸೇರಿದಂತೆ ಹಲವು ನೌಕರರು ಇದ್ದರು.