ರತ್ನಗಿರಿ: ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಅಡ್ಡಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿಸಿ ವಾಯುವ್ಯ ಕರ್ನಾಟಕ ರಾಜ್ಯ ಸಾರಿಗೆ ಬಸ್ ರಸ್ತೆ ಬದಿಯ ಹಳ್ಳಿಕ್ಕೆ ಬಿದ್ದು ಬೆಂಕಿಗಾಹುತಿಯಾಗಿದ್ದು, ಚಾಲಕ, ನಿರ್ವಾಹಕರು ಸೇರಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ರತ್ನಗಿರಿ-ಬೆಳಗಾವಿ ಮಾರ್ಗ ಮಧ್ಯೆ ಸಂಭವಿಸಿದೆ.
ಗುರುವಾರ ಸಂಜೆ ಬೆಳಗಾವಿ ಘಟಕದ ಬಸ್ ರತ್ನಗಿರಿ-ಬೆಳಗಾವಿ ಮಾರ್ಗದಲ್ಲಿ ಕಾರ್ಯಾಚರಣೆಗೊಂಡಿದೆ. ವಾಹನವು ರತ್ನಗಿರಿಯಿಂದ ಬೆಳಗಾವಿಗೆ ಬರುವಾಗ ಮಹಾರಾಷ್ಟ್ರದ ಸಾಕರ್ಪ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಏಕಾಏಕಿ ಬಲಗಡೆಗೆ ಬಂದಿದ್ದು ಅವನನ್ನು ತಪ್ಪಿಸಲು ಚಾಲಕರು ವಾಹನವನ್ನು ಎಡಕ್ಕೆ ತೆಗೆದುಕೊಂಡಿದ್ದಾರೆ.
ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಎಡಬದಿಯ ಹಳ್ಳಕ್ಕೆ ಬಿದ್ದಿದೆ ಪರಿಣಾಮ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಅದು ಮುಂದಿನ ಚಕ್ರಕ್ಕೂ ತಗುಲಿದೆ. ಬಳಿಕ ನೋಡನೋಡುತ್ತಿದ್ದಂತೆ ಬೆಂಕಿಯು ಇಡಿ ಬಸ್‌ಅನ್ನೇ ಆವರಿಸಿದ್ದು ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಚಾಲಕ ಎಸ್.ಎಂ. ಮಾಯನ್ನವರ ಮತ್ತು ನಿರ್ವಾಹಕ ಎ.ಬಿ. ಬಾಗಳ್ಳಿ ಸೇರಿದಂತೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 15 ಮಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಮಹಾರಾಷ್ಟ್ರದ ಸಾಕರ್ಪ ಠಾಣೆ ಪೊಲೀಸರು ಗಾಯಾಳುಗಳನ್ನು ಸಾಕರ್ಪ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಪಘಾತದಿಂದ ಚಾಲಕ ಎಸ್.ಎಂ. ಮಾಯನ್ನವರ ತಲೆಗೆ ತೀವ್ರ ಪೆಟ್ಟಾಗಿದ್ದು, ಕೈ ಮುರಿದಿದೆ. ಅಲ್ಲದೆ ಕಾಲಿನ ಹಿಮ್ಮಡಿಗೆ ತೀವ್ರತರವಾದ ಪೆಟ್ಟು ಬಿದ್ದಿದೆ. ಇನ್ನು ನಿರ್ವಾಹಕ ಎ.ಬಿ.ಬಾಗಳ್ಳಿ ಅವರ ಕೈ ಕಾಲು ಮತ್ತು ಎದೆ ಭಾಗಕ್ಕೆ ಮೂಗುಗಾಯಗಳಾಗಿವೆ.
ಬಸ್‌ನಲ್ಲಿ ಇದ್ದ 13 ಪ್ರಯಾಣಿಕರಲ್ಲಿ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಸಾಕರ್ಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅವರಲ್ಲಿ ಕೆಲವರನ್ನು ಆಸ್ಪತ್ರೆಯಲ್ಲೇ ಉಳಿಸಿಕೊಂಡು ಚಿಕಿತ್ಸೆ ಮುಂದುವರಿಸಿದ್ದು, ಅಲ್ಪ ಪ್ರಮಾಣದಲ್ಲಿ ಗಾಯಗೊಂಡವರನ್ನು ಹೊರರೋಗಿಗಳ ವಿಭಾಗದಲ್ಲೇ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಸಂಬಂಧ ಸಾಕರ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.