ಮೈಸೂರು : ವಿಜಯದಶಮಿಯ ದಿನವಾದ ಬುಧವಾರ ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು.
ಜಂಬೂಸವಾರಿ ಅಂಬಾರಿಯಲ್ಲಿ ಸಾಗುವ ಉತ್ಸವ ಮೂರ್ತಿಯನ್ನು ಮಂಗಳವಾದ್ಯ, ನಾದಸ್ವರತಂಡದೊಂದಿಗೆ ಮೆರವಣಿಗೆ ಮೂಲಕ ಅರಮನೆಗೆ ಕರೆತರಲಾಗುತ್ತಿದೆ.
ಉತ್ಸವ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಬೆಟ್ಟದ ತಳಭಾಗದ ರಸ್ತೆಯ ಎರಡುಬದಿ ಭಕ್ತಸಮೂಹವೇ ನೆರೆದಿದೆ.
ಶಾಸಕರಾದ ಎಸ್.ಎ.ರಾಮದಾಸ್, ಎಲ್. ನಾಗೇಂದ್ರ, ಜಿ.ಟಿ.ದೇವೇಗೌಡ, ಮೇಯರ್ ಶಿವಕುಮಾರ್ ಸೇರಿದಂತೆ ನಾನಾ ಗಣ್ಯರು ಉಪಸ್ಥಿತರಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಸಂಭ್ರಮ ಮನೆಮಾಡಿದೆ. ವಿಜಯದಶಮಿ ದಿನವಾದ ಇಂದು (ಬುಧವಾರ) ಜಂಬೂಸವಾರಿಗೆ ಕ್ಷಣ ಗಣನೆ ಆರಂಭವಾಗಿದೆ. ಅಂಬಾರಿ ಹೊರಲಿರುವ ಆನೆ ಅಭಿಮನ್ಯುವಿನ ಎಡ ಹಾಗೂ ಬಲದಲ್ಲಿ ಕುಮ್ಕಿ ಆನೆಗಳು ಹೆಜ್ಜೆ ಹಾಕಲಿವೆ.
ಈಗಾಗಲೇ ಜಂಬೂ ಸವಾರಿಗೆ ಭರ್ಜರಿ ತಯಾರಿ ನಡೆಯುತ್ತಿದ್ದು, ಮುಂಜಾನೆ 4.30 ರಿಂದಲೇ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಬಣ್ಣ ಬಳಿಯುವ ಕೆಲಸ ನಡೆಯುತ್ತಿದೆ. ಮಧ್ಯಾಹ್ನ 2 ಗಂಟೆ ನಂತರ ಅಂಬಾರಿ ಹೊರಲಿರುವ ಅಭಿಮನ್ಯು ಆನೆಗೆ ಗಾದಿ ಕಟ್ಟಿ ಅಂಬಾರಿ ಕಟ್ಟೊ ಕಾರ್ಯ ಆರಂಭವಾಗುತ್ತದೆ.
ಅರಮನೆಯಲ್ಲಿ ಮುಂಜಾನೆ 4.40ರಿಂದ ಹೋಮ ಆರಂಭವಾಗಿದ್ದು, ಹೋಮಕ್ಕೆ ಯದುವೀರ್‌ರಿಂದ ಪೂರ್ಣಾಹುತಿ ನೀಡಿದ್ದು, 5.45ಕ್ಕೆ ಆನೆ ಕುದುರೆ ಹಸುಗಳ ಆಗಮನವಾಗಿದೆ. 6.13 ರಿಂದ 6.32ರವರೆಗೆ ಪೂಜಾ ವಿಧಿ ವಿಧಾನಗಳು ಸಾಗಿದ್ದು, ನಂತರ ಖಾಸಾ ಆಯುಧಗಳಿಗೆ ಯದುವೀರ್ ರಿಂದ ಉತ್ತರ ಪೂಜೆ ಮಾಡಿದ್ದು, ಉತ್ತರ ಪೂಜೆ ನಂತರ ಶಮಿ ಪೂಜೆ ನೆರವೇರಿಸಲಿದ್ದಾರೆ.
ನಂತರ ಚಾಮುಂಡಿ ದೇವಿ ವಿಗ್ರಹ ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ರವಾನೆಯಾಗಲಿದ್ದು, ಅದರ ನಂತರ ದೇವಾಲಯದಿಂದ ಪಟ್ಟದ ಕತ್ತಿ ಭುವನೇಶ್ವರಿ ದೇವಾಲಯಕ್ಕೆ ಕಳುಹಿಸಲಾಗುತ್ತದೆ.
ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಈ ಬಾರಿ ಚಾಮುಂಡಿಬೆಟ್ಟದಿಂದ ಮೆರವಣಿಗೆ ಮೂಲಕ ಅರಮನೆಗೆ ತರಲಾಗುತ್ತಿದೆ. ಉತ್ಸವ ಮೂರ್ತಿ ತರುವ ಅಲಂಕೃತ ವಾಹನದೊಂದಿಗೆ ನಾದಸ್ವರ ತಂಡ, ಪೊಲೀಸ್ ಬ್ಯಾಂಡ್, ಅಶ್ವದಳ, ಭಜನಾ ತಂಡ, ವೇದಘೋಷ, ಚಂಡೆ, ನವದುರ್ಗೆಯರು ಸಾಗುವರು. ತಾವರಕಟ್ಟೆ, ಇಟ್ಟಿಗೆಗೂಡು, ಹಾರ್ಡಿಂಚ್ ವೃತ್ತದ ಮೂಲಕ ಅರಮನೆ ಪ್ರವೇಶಿಸಲಾಯಿತು.