ಚಿತ್ರದುರ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಕಳೆದ ಅ.10ರಂದು ಬಳ್ಳಾರಿಯಲ್ಲಿ ಚಾಲನೆ ನೀಡಿರುವ ಬೃಹತ್ ಸೈಕಲ್ ಜಾಥಾದಲ್ಲಿ ನಿರಂತರವಾಗಿ 38ದಿನಗಳಿಂದ ಸೈಕಲ್ ತುಳಿಯುತ್ತಿದರುವ ನೌಕರ ಕೃಷ್ಣ ಗುಡುಗುಡಿ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು ಅವರನ್ನು ಕೂಡಲೇ ಚಿತ್ರದುರ್ಗದಲ್ಲಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು.
ಈ ವೇಳೆ ವೈದ್ಯರು ನಿಗಾದಲ್ಲಿ (Observation) ಇರಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಗಾಬರಿಗೊಂಡ ಸೈಕಲ್ ಜಾಥಾದ ನೇತೃತ್ವ ವಹಿಸಿರುವ ಕೂಟದ ಅಧ್ಯಕ್ಷ ಚಂದ್ರಶೇಖರ್ ಅವರು ಕೂಡಲೇ ಎಲ್ಲ ರೀತಿಯ ತಪಾಸಣೆ ಮಾಡಿಸಬೇಕು ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.
ಜಯದೇವ ಹೃದ್ರೋಗ ತಜ್ಞರು ಇಸಿಜಿ ಸೇರಿದಂತೆ ಎಲ್ಲ ರೀತಿಯ ಪರೀಕ್ಷೆ ಮಾಡಿದ ಬಳಿಕ ಅವರಿಗೆ ಯಾವುದೇ ರೀತಿಯ ಹೃದಯ ಸಂಬಂಧಿ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ. ವೈದ್ಯರ ಮಾತು ಕೇಳಿ ಸೈಕಲ್ ಜಾಥಾದಲ್ಲಿ ನಿರತರಾಗಿರುವ ನೌಕರರು ಗಾಬರಿಯಿಂದ ಹೊರಬಂದಿದ್ದಾರೆ. ಅಲ್ಲದೆ ಮತ್ತೆ ಸೈಕಲ್ ಜಾಥಾದಲ್ಲಿ ಕೃಷ್ಣ ಅವರು ಭಾಗವಹಿಸುತ್ತಿದ್ದಾರೆ ಎಂದು ಚಂದ್ರಶೇಖರ್ ವಿಜಯಪಥಕ್ಕೆ ತಿಳಿಸಿದ್ದಾರೆ.
ಇನ್ನು ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಂತೆ ಸರಿ ಸಮಾನ ವೇತನ ಸೇರಿದಂತೆ ಇತರ ಸೌಲಭ್ಯಗಳು ಸಿಗಬೇಕು ಎಂದು ಕಳೆದ 39ದಿನಗಳಿಂದ ರಾಜ್ಯಾದ್ಯಂತ ಕೂಟದ ಪದಾಧಿಕಾರಿಗಳು ಬೃಹತ್ ಸೈಕಲ್ ಜಾಥಾ ಹಮ್ಮಿಕೊಂಡಿದ್ದು, ಈಗಗಾಲೇ 1600 ಕ್ಕೂ ಹೆಚ್ಚು ಕಿಲೋ ಮೀಟರ್ ಸೈಕಲ್ ತುಳಿಯುವ ಮೂಲಕ 15ಕ್ಕೂ ಹೆಚ್ಚು ಜಿಲ್ಲೆಗಳನ್ನು ತಲುಪಿ ಆಯಾಯ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಿದ್ದಾರೆ.
ವೈದ್ಯರು, ಶುಶ್ರೂಷಕರ ವ್ಯವಸ್ಥೆ ಮಾಡಿಲ್ಲ: ಆದರೆ, ಸೈಕಲ್ ಜಾಥಾ ಮಾಡುತ್ತಿರುವ ಸಾರಿಗೆ ನೌಕರರ ಆರೋಗ್ಯ ವಿಚಾರ ಸಂಬಂಧ ಸರ್ಕಾರವಾಗಲಿ ಅಥವಾ ಸಾರಿಗೆ ನಿಗಮಗಳ ಅಧಿಕಾರಿಗಳಾಗಲೀ ವೈದ್ಯರು, ಶುಶ್ರೂಷಕರನ್ನ ವ್ಯವಸ್ಥೆ ಮಾಡಿಲ್ಲ. ಇದು ರಾಜ್ಯ ಸರ್ಕಾರದ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ.
ನೌಕರರ ಜಾಥಾ ಸಾಗುವ ಮಾರ್ಗ ಮಧ್ಯೆ ವೈದ್ಯರಿಂದ ಜಾಥಾದಲ್ಲಿ ಭಾಗವಹಿಸಿರುವ ನೌಕರರ ಆರೋಗ್ಯ ತಪಾಸಣೆ ಮಾಡಿಸಬೇಕು. ಅದನ್ನು ಮಾಡಿಸದೆ ಎಷ್ಟು ನಿಕೃಷ್ಠವಾಗಿ ನೌಕರರ ವಿರುದ್ಧ ಸರ್ಕಾರ ನಡೆದುಕೊಳ್ಳುತ್ತಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೆ ಎಂದು ಸಾರ್ವಜನಿಕರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು ಈಗಲಾದರೂ ಜಿಲ್ಲಾ ಕೇಂದ್ರಗಳನ್ನು ತಲುಪುವ ಸೈಕಲ್ ಜಾಥಾ ನಿರತ ಸಾರಿಗೆ ನೌಕರರು ಇರುವ ಸ್ಥಳಕ್ಕೇ ಬಂದು ವೈದ್ಯರು ಆರೋಗ್ಯ ತಪಾಣೆ ಮಾಡುವಂತಹ ಕ್ರಮ ಜರುಗಿಸಬೇಕು, ಇಲ್ಲದಿದ್ದರೆ ನೌಕರರಿಗೆ ಏನಾದರೂ ಅತಾಚೂರ್ಯವಾದರೆ ಅದರ ಹೊಣೆಯನ್ನು ಸರ್ಕಾರ ಮತ್ತು ಸಾರಿಗೆ ನಿಗಮಗಳ ಅಧಿಕಾರಿಗಳೇ ಹೊರಬೇಕಾಗುತ್ತದೆ ಎಂದು ಜನರೇ ಎಚ್ಚರಿಕೆ ನೀಡಿದ್ದಾರೆ.
ಸಾರಿಗೆ ನೌಕರರ ಸೈಕಲ್ ಜಾಥಾ ಏಕೆ? ತಮಗೆ 3-4 ದಶಕಗಳಿಂದ ಆಗುತ್ತಿರುವ ತಾರತಮ್ಯತೆಯನ್ನು ನಿವಾರಿಸಿ ಸರಿಸಮಾನ ವೇತನ ನೀಡಬೇಕು. ಸಾರಿಗೆ ಸಂಸ್ಥೆಯಲ್ಲಿ ಖಾಸಗೀಕರಣ ನೀತಿಯನ್ನು ಕೈ ಬಿಡಬೇಕು. ಸಾರಿಗೆ ಕಾರ್ಮಿಕ ಸಂಘಟನೆಗಳ ಚುನಾವಣೆ ನಡೆಸಬೇಕು.
ಮುಷ್ಕರದ ಸಮಯದಲ್ಲಿ ಆಗಿರುವಂತಹ ಸುಳ್ಳು ಪೊಲೀಸ್ ಕೇಸ್ ಹಿಂಪಡೆಯಬೇಕು. ಚೌಕಾಸಿ ವೇತನ ಪರಿಷ್ಕರಣೆ ತೊಲಗಿಸಿ ಸಾರಿಗೆ ನೌಕರರನ್ನು ಉಳಿಸಬೇಕು. ವೇತನ ಆಯೋಗವೇ ಬೇಕು. ಅಗ್ರಿಮೆಂಟ್ ಬೇಡ. ನಾಲ್ಕು ವರ್ಷಕ್ಕೊಮ್ಮೆ ಸಾರಿಗೆ ಕಾರ್ಮಿಕರ ಬಲಿ ನಿಲ್ಲಲ್ಲಿ ಎಂದು ಒತ್ತಾಯಿಸಿ ಸಾರಿಗೆ ನೌಕರರು ಸೈಕಲ್ ಜಾಥಾ ಹಮ್ಮಿಕೊಂಡಿದ್ದಾರೆ.
ಜಾಥಾದಲ್ಲಿ ಪ್ರಮುಖವಾಗಿ ಕೂಟದ ಅಧ್ಯಕ್ಷ ಚಂದ್ರಶೇಖರ್, ಪದಾಧಿಕಾರಿಗಳಾದ ಮಕಂದರ್ ಸಾಬ್, ಕೃಷ್ಣ ಗುಡುಗುಡಿ, ಸಂತೋಷ್ ಕುಮಾರ್, ಕೇಶವ್ ಅವರು ನಿರಂತರವಾಗಿ ಕ್ರಮಿಸುತ್ತಿದ್ದಾರೆ. ಇವರ ಜತೆಗೆ ಜಾಥಾ ತಲುಪುವ ಹೋಬಳಿ, ತಾಲೂಕು, ಪಟ್ಟಣ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸಾರಿಗೆ ನೌಕರರು ಕೈ ಜೋಡಿಸುವ ಮೂಲಕ ಸಾಥ್ ನೀಡುತ್ತಿದ್ದಾರೆ.
ಖಾರವಾಗಿಯೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಕೂಟ: ಕಳೆದ 39 ದಿನಗಳಿಂದ ನಿರಂತರವಾಗಿ ಸಾರಿಗೆ ನೌಕರರು ರಾಜ್ಯಾದ್ಯಂತ ಶಾಂತಿಯುತವಾಗಿ ಸೈಕಲ್ ಜಾಥಾ ನಡೆಸುತ್ತಿದ್ದರೂ ಸರ್ಕಾರ ಜಾಣ ಪೆದ್ದನಂತೆ ವರ್ತಿಸುತ್ತಿದೆ. ಈವರೆಗೂ ಜಾಥಾ ಕೈಬಿಟ್ಟು ಬನ್ನಿ ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಚರ್ಚಿಸೋಣ ಎಂದು ಕರೆಯದೆ ತನ್ನ ಉದ್ಧಟತನವನ್ನು ತೋರಿಸುತ್ತಿದೆ.
ಸದ್ಯ ಶಾಂತಿಯುತವಾಗಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಜಾಥಾ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಇದಕ್ಕೂ ಬಗ್ಗದೆ ಹೋದರೆ ಮುಂದಿನ ದಿನಗಳಲ್ಲಿ ಕಳೆದ 2021ರ ಏಪ್ರಿಲ್ನಲ್ಲಿ ನಿಲ್ಲಿಸಿದಂತೆ ಎಲ್ಲ ಡಿಪೋಗಳಲ್ಲೂ ಬಸ್ಗಳನ್ನು ನಿಲ್ಲಿಸಿ ಬೃಹತ್ ಹೋರಾಟ ಮಾಡಬೇಕಾಗುತ್ತಿದೆ ಎಂದು ಕೂಟದ ಪದಾಧಿಕಾರಿಗಳು ಖಾರವಾಗಿಯೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.