ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಈ ಬಾರಿಯ ಬಜೆಟ್‌ನಲ್ಲಿ ಮಹಿಳೆಯರು ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಲು ಉಚಿತ ಬಸ್‌ಪಾಸ್ ಯೋಜನೆ ಜಾರಿಗೆ ತರಬೇಕು, ಮಹಿಳಾ ದಿನಾಚರಣೆ ಹೊತ್ತಿನಲ್ಲಿ ಉಡುಗೊರೆ ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಮ್ ಆದ್ಮಿ ಪಕ್ಷದ ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ ಆಗ್ರಹಿಸಿದ್ದಾರೆ.
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೆಹಲಿಯ ಆಮ್ ಆದ್ಮಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮಹಿಳೆಯರಿಗೆ ಎಲ್ಲಾ ಪ್ರಕಾರಗಳ ಸಾರಿಗೆ ವ್ಯವಸ್ಥೆಯಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಿತು. ಇದೇ ಮಾದರಿಯನ್ನು ಬೆಂಗಳೂರು ನಗರದ ಮಹಿಳೆಯರಿಗೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷದ ಕಳೆದ ವರ್ಷ ಮಾರ್ಚ್ 5 ರಂದು ಪಕ್ಷದ ನಿಯೋಗ ಭೇಟಿ ಮಾಡಿ ಈ ಯೋಜನೆ ಜಾರಿಗೆ ತರುವಂತೆ ಮನವಿ ಸಲ್ಲಿಸಿತ್ತು.
ಆದರೆ ಇದನ್ನು ತಪ್ಪು ತಪ್ಪಾಗಿ ನಕಲು ಮಾಡಿದ ಯಡಿಯೂರಪ್ಪ ಅವರು ಕಳೆದ ಬಜೆಟ್ ವೇಳೆ ಕೇವಲ ಗಾರ್ಮೆಂಟ್ಸ್ ಮಹಿಳೆಯರಿಗೆ ಮಾತ್ರ ಉಚಿತ ಬಸ್ ಪಾಸ್ ಯೋಜನೆ ಘೋಷಣೆ ಮಾಡಿದರೆ ಹೊರತು ಕೊರೊನಾ ನೆಪವೊಡ್ಡಿ ನಯಾ ಪೈಸೆ ಹಣ ಬಿಡುಗಡೆ ಮಾಡಲಿಲ್ಲ. ಈ ಬಾರಿಯಾದರೂ ನಂಬಿಕೆ ದ್ರೋಹ ಮಾಡದೆ ಆಮ್ ಆದ್ಮಿ ಪಕ್ಷದ ಮನವಿಗೆ ಸ್ಪಂದಿಸಬೇಕು ಎಂದರು.
ನಗರ ಭಾಗದಲ್ಲಿ ಜೀವನ ನಡೆಸಲು ಗಂಡ-ಹೆಂಡತಿ ಇಬ್ಬರು ದುಡಿಯಬೇಕಾದ ಪರಿಸ್ಥಿತಿ ಇದೆ. ಇದನ್ನು ಸರಿದೂಗಿಸಬೇಕಾದರೆ ದುಡಿಮೆಗೆ ಹೋಗುವ ಮಹಿಳೆಯರಿಗೆ ಉಚಿತ ಸಾರಿಗೆ ನೀಡಬೇಕು.
ನಮ್ಮ ದೇಶದಲ್ಲಿ ದುಡಿಯುತ್ತಿರುವ ಗಂಡ ಹೆಂಡತಿಯರ ಸರಾಸರಿ ಶೇ. 21 ರಷ್ಟಿದೆ. ತೃತಿಯ ಜನಗತ್ತಿನ ದೇಶಗಳನ್ನು ಹೊರತು ಪಡಿಸಿ ಬೇರೆ ದೇಶಗಳಲ್ಲಿ ಈ ಪ್ರಮಾಣ ಶೇ 46 ರಷ್ಟಿದೆ. ಇದನ್ನು ಹೆಚ್ಚಳ ಮಾಡಲು ಯೋಜನೆ ರೂಪಿಸಬೇಕು.
ದೆಹಲಿಯಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರಿ ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡಿದ್ದೇ ಮಹಿಳೆಯರಿಗೆ ಉಚಿತ ಸಾರಿಗೆ ಯೋಜನೆ. ಆದ ಕಾರಣ ಈ ಅಂಶಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಮಹಿಳಾಪರವಾದ ಉಚಿತ ಬಸ್‌ಪಾಸ್ ಯೋಜನೆ ಸರಿಯಾದ ರೀತಿಯಲ್ಲಿ ಘೋಷಣೆ ಮಾಡದಿದ್ದರೆ ಆಮ್ ಆದ್ಮಿ ಪಕ್ಷ ಸುಮ್ಮನೆ ಕೂರುವುದಿಲ್ಲ, ಬೃಹತ್ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಹಿಳಾ ಘಟಕದ ಸುಧಾಮಣಿ, ಯುವ ಘಟಕದ ಉಪಾಧ್ಯಕ್ಷೆ ಸಿಂಧು ಮಳವಳ್ಳಿ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.