- ವಿಜಯಾ ಶಂಕರ ಕಾವ್ಯನಾಮದಿಂದ ಹಲವು ದಶಕಗಳಿಂದ ಸಾಹಿತ್ಯ ಕೃಷಿ ಮಾಡುತ್ತಿರುವ ಕಾದಂಬರಿಗಾರ್ತಿ ಎ.ವಿಜಯಕುಮಾರಿ ಅವರದು ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಮಹಿಳಾ ಸಾಹಿತ್ಯ ವಲಯದಲ್ಲಿ ಪ್ರಮುಖವಾದ ಹೆಸರು.
ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಈಗಾಗಲೇ 25ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಸಾಹಿತ್ಯಲೋಕಕ್ಕೆ ನೀಡಿ ಖ್ಯಾತರಾಗಿರುವ ವಿಜಯಾಶಂಕರ ಅವರ ಕವಲುದಾರಿ ( ಕಾದಂಬರಿ ) ಹಾಗೂ ಭೂತಾಯಿ ನಕ್ಕಾಗ ( ಕಥಾಸಂಕಲನ ) ಕೃತಿಗಳೆರಡೂ ಮಾರ್ಚ್ 8ರ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಲೋಕಾರ್ಪಣೆಗೊಳ್ಳುತ್ತಿವೆ.
ಮಾರ್ಚ್ 8 ಸೋಮವಾರ ಬೆಳಗ್ಗೆ 10.30 ಕ್ಕೆ ಮೈಸೂರು ನಗರದ ತ್ಯಾಗರಾಜ ರಸ್ತೆ 5ನೇ ತಿರುವಿನಲ್ಲಿರುವ ಅಕ್ಕನಬಳಗ ಸಭಾಂಗಣದಲ್ಲಿ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ಒಟ್ಟಾಗಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಸಾಹಿತಿ, ಪತ್ರಕರ್ತ ಬನ್ನೂರು ಕೆ. ರಾಜು ಕೃತಿಗಳನ್ನು ಬಿಡುಗಡೆ ಮಾಡುವರು.
ಮೈಸೂರು ಆರ್ಟ್ ಗ್ಯಾಲರಿಯ ಸಂಸ್ಥಾಪಕ ಅಧ್ಯಕ್ಷ ಚಿತ್ರಕಲಾವಿದ ಎಲ್.ಶಿವಲಿಂಗಪ್ಪ ಅಧ್ಯಕ್ಷತೆ ವಹಿಸಲಿದ್ದು, ಕೃತಿಗಳನ್ನು ಕುರಿತು ಲೇಖಕಿ ಹಾಗೂ ವಿಶ್ರಾಂತ ಪ್ರಾಧ್ಯಾಪಕಿ ಡಾ. ಸಿ. ಜಿ. ಉಷಾದೇವಿ ಮಾತನಾಡುವರು.
ಇದೇ ಸಂದರ್ಭದಲ್ಲಿ ಕವಿಗೋಷ್ಠಿ ನಡೆಯಲಿದ್ದು, ಚಿತ್ರಕಲಾವಿದೆ, ಕವಯಿತ್ರಿ ಡಾ. ಜಮುನಾರಾಣಿ ಮಿರ್ಲೆ ಅವರು ಕವಿಗೋಷ್ಠಿ ಉದ್ಘಾಟಿಸುವರು. ವಿವಿಧ ಕಡೆಗಳಿಂದ ಆಗಮಿಸುವ ಸುಮಾರು ಇಪ್ಪತ್ತು ಮಂದಿ ಕವಿ ಕವಯತ್ರಿಯರು ತಮ್ಮ ಕವನಗಳನ್ನು ವಾಚಿಸಿಸುವರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಎಚ್.ವಿ. ಮುರಳೀಧರ, ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ ಉಪಸ್ಥಿತರಿರುವರು.