ವಿಜಯಪಥ ಸಮಗ್ರ ಸುದ್ದಿ
ವಿರಾಜಪೇಟೆ: ಕೊಡಗಿನ ದಕ್ಷಿಣ ಭಾಗದಲ್ಲಿ ಹುಲಿಯಿಂದ ಜನರು ಬೆಚ್ಚಿ ಬೀಳುತ್ತಿದ್ದಾರೆ. ಇತ್ತೀಚೆಗಷ್ಟೇ ಹುಲಿ ದಾಳಿ ಮಾಡಿದ ಘಟನೆ ಮಾಸುವ ಮುನ್ನವೆ ನಗರಕ್ಕೆ ಹೊಂದಿಕೊಂಡಿರುವ ಮಗ್ಗುಲ ಗ್ರಾಮದಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು, ಅದರ ಹೆಜ್ಜೆಯ ಗುರುತನ್ನು ಇಟ್ಟು ಹೋಗಿದೆ. ಇದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.
ಚೆಂಬೇಬೆಳ್ಳೂರು ಗ್ರಾಪಂ ವ್ಯಾಪ್ತಿಯ ಮಗ್ಗುಲ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿಂದ ಅನತಿ ದೂರದಲ್ಲಿ ಪುಲಿಯಂಡ ಜಗದೀಶ್ ಎಂಬುವರ ತೋಟದ ಕೆರೆಯ ಭಾಗದಲ್ಲಿ ಶುಕ್ರವಾರ ಬೆಳಗ್ಗೆ ಹುಲಿಯ ಹೆಜ್ಜೆ ಗುರುತು ಕಾಣಿಸಿಕೊಂಡಿದೆ.
ಜಗದೀಶ್ ಅವರ ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗುವ ವೇಳೆ ಕೆರೆಯ ಏರಿ ಮೇಲೆ ಹುಲಿಯ ಹೆಜ್ಜೆಯ ಗುರುತು ನೋಡಿ ಗಾಬರಿಗೊಂಡು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ.
ಭಯ ಭೀತರಾದ ಕಾರ್ಮಿಕರು ತೋಟದ ಮಾಲೀಕರಿಗೂ ವಿಷಯ ಮುಟ್ಟಿಸಿದ್ದು, ತೋಟದ ಮಾಲೀಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ವಲಯ ಅರಣ್ಯಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮತ್ತೆ ಹುಲಿ ಬಂದರೆ ಅದನ್ನು ಹೇಗೆ ಸೆರೆ ಹಿಡಿಯುವುದು ಎಂಬ ಬಗ್ಗೆ ಪ್ಲಾನ್ ಮಾಡುತ್ತಿದ್ದಾರೆ.