
ಬೆಳಗಾವಿ: ಈ ವರ್ಷ ಇದೇ ಮಾರ್ಚ್ 21ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಿದ್ದ 17 ವರ್ಷದ ವಿದ್ಯಾರ್ಥಿನಿ ಪ್ರೀತಿಸು ಎಂದು ಹಿಂದೆ ಬಿದ್ದದ ಯುವಕನ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
10ನೇ ತರಗತಿಯಲ್ಲಿ ಓದುತ್ತಿದ್ದ ಅಪ್ರಾಪ್ತೆ ಇನ್ನೇನು ಪರೀಕ್ಷೆ ಬರೆಯಲು ಸಹ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಳು. ಮಾ.21ರಿಂದ ಪರೀಕ್ಷೆಗೆ ಹಾಜರಾಗಬೇಕು ಎನ್ನುವಷ್ಟರಲ್ಲಿ ಬಾಲಕಿ ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿ ಬಾರದ ಲೋಕಕ್ಕೆ ಹೋಗಿದ್ದಾಳೆ.
ಸಿದ್ದಲಿಂಗ ಪೂಜೇರಿ ಎಂಬ ಯುವಕನ ಕಾಟದಿಂದ ಅಪ್ರಾಪ್ತೆ ನಿನ್ನೆ ಅಂದರೆ ಮಾರ್ಚ್ 16ರಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮಾರ್ಚ್ 17ರ ಬೆಳಗ್ಗೆ ಮೃತಪಟ್ಟಿದ್ದಾಳೆ.
ಘಟಪ್ರಭಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರ ನಿವಾಸಿ ಸಿದ್ದಲಿಂಗ ಪೂಜೇರಿ (21) ಎಂಬಾತ, ಇನ್ನೂ ಮೀಸೆ ಸರಿಯಾಗಿ ಚಿಗುರಿಲ್ಲ. ಆಗಲೇ ಪ್ರೀತಿ ಪ್ರಣಯ ಅಂತ ಅಪ್ರಾಪ್ತಯನ್ನು ಬಲಿಪಡೆದು ಈಗ ಕಂಬಿಹಿಂದೆ ಸೇರೆಯಾಗಿದ್ದಾನೆ.
ಪ್ರೀತ್ಸೇ ಪ್ರೀತ್ಸೇ ಅಂತ ಬಾಲಕಿ ಹಿಂದೆ ಬಿದ್ದು ಟಾರ್ಟರ್ ಕೊಡುತ್ತಿದ್ದ. ಇದರಿಂದ ಹಲವಾರು ಬಾರಿ ಆತನಿಗೆ ಎಚ್ಚರಿಕೆ ಕೂಡ ನೀಡಲಾಗಿತ್ತು. ಆದರೂ ಸಹ ತನ್ನ ಚಾಳಿಯನ್ನು ಬಿಟ್ಟಿರಲಿಲ್ಲ. ಕಾರಣಕ್ಕೆ ಮನನೊಂದು ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಈ ವೇಳೆ ಪಕ್ಕದ ಮನೆಯವರು ಅದನ್ನು ಗಮನಿಸಿ ತಂದೆ ತಾಯಿಗೆ ಹೇಳಿದ್ದಾರೆ ಇತ್ತ ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರವಾಗಿ ಸುಟ್ಟ ಗಾಯಗಳಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ತಡರಾತ್ರಿ ಪೋಷಕರು ಕರೆತಂದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ಶಾಲೆಗೆ ಹೋಗುವಾಗ ಮತ್ತು ಬರುವಾಗ ತನ್ನನ್ನು ಪ್ರೀತಿಸು ಎಂದು ಸಿದ್ದಲಿಂಗ ಪೀಡಿಸುತ್ತಿದ್ದ ಹೀಗಾಗಿ ಮನನೊಂದು ನಮ್ಮ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಬಾಲಕಿ ಪೋಷಕರು ಆರೋಪಿಸುತ್ತಿದ್ದಾರೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಕೂಡಲೇ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಒಟ್ಟಿನಲ್ಲಿ ಜಗತ್ತನ್ನೇ ಅರಿಯದ ವಯಸ್ಸಲ್ಲಿ ಪ್ರೀತಿ ಪ್ರೇಮದ ಗುಂಗಿಗೆ ಬಿದ್ದ ಯುವಕ ಬಾಲಕಿಯ ಸಾವಿಗೆ ಕಾರಣವಾಗಿದ್ದಾನೆ. ಇದರಿಂದ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರೆ ಇತ್ತ ಪರೀಕ್ಷೆ ಬರೆದು ಜೀವನದ ಮುಂದಿನ ಭವಿಷ್ಯ ರೂಪಿಸಿಕೊಳ್ಳಬೇಕಿದ್ದ ಬಾಲಕಿ ಜೀವನದ ಅಗ್ನಿಪರೀಕ್ಷೆಯನ್ನೇ ಮುಗಿಸಿ ಬಾರದ ಲೋಕಕ್ಕೆ ಹೋಗಿದ್ದಾಳೆ.