ಹನೂರು : ಮಲೆ ಮಹದೇಶ್ವರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನಾಗಿ ಘೋಷಣೆ ಮಾಡುವ ಮೊದಲು ಬೆಟ್ಟದ ತಪ್ಪಲಿನ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಲೆ ಮಾದೇಶ್ವರ ಬೆಟ್ಟದ ದೇವಾಲಯದ ಮುಂಭಾಗದಿಂದ ಹೊರಟ ಪ್ರತಿಭಟನೆ ಮೆರವಣಿಗೆ ಕೊಳ್ಳೇಗಾಲ ಮುಖ್ಯರಸ್ತೆಯ ಚೆಕ್ ಪೋಸ್ಟ್ ಸಮೀಪ ಜಮಾವಣೆಗೊಂಡ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದಾದ ಮಲೆ ಮಾದೇಶ್ವರ ಬೆಟ್ಟದಲ್ಲಿ ಆರೋಗ್ಯ ಸೇವೆ ಸಿಗದ ಪರಿಣಾಮ ನೆರೆಯ ತಮಿಳುನಾಡಿಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಮಲೆ ಮಾದೇಶ್ವರ ಬೆಟ್ಟಕ್ಕೆ ಆಗಮಿಸಿದ್ದ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವ ಭರವಸೆ ನೀಡಿದ್ದರು.
ಆದರೆ, ಇದುವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಈ ಕೂಡಲೇ ಸಂಬಂಧಪಟ್ಟ ಆರೋಗ್ಯ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಹೊನ್ನೂರು ಬಸವಣ್ಣ ಮಾತನಾಡಿ, ಚೆಂಗಡಿ ಗ್ರಾಮ ಸ್ಥಳಾಂತರ ಮಾಡುವ ಯೋಜನೆ ನನೆಗುದ್ದಿಗೆ ಬಿದ್ದಿದೆ . ಅರಣ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿಗಳಿಗೂ ಮನವಿ ನೀಡಿದ್ದರು ಇದುವರೆಗೂ ಸ್ಥಳಾಂತರ ಪೂರ್ಣಗೊಂಡಿಲ್ಲ. ಮಲೆಮಹದೇಶ್ವರ ಡಿಸಿಎಫ್ ಸಂತೋಷ್ ಕುಮಾರ್ ಅವರಿಗೆ ಕಾಡಿನ ಬಗ್ಗೆ ಅರಿವೇ ಇಲ್ಲ, ಸ್ಥಳಾಂತರದ ಬಗ್ಗೆ ಅವರಿಗೂ ಸಹ ಮನವರಿಕೆ ಮಾಡಿದ್ದರು ಇದುವರೆಗೂ ಸ್ಪಂದಿಸಿಲ್ಲ ಅವರು ಕೇವಲ ದುಡ್ಡು ಮಾಡಲು ಬಂದಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಮುಂದಿನ ತಿಂಗಳು ಮುಖ್ಯಮಂತ್ರಿಗಳು ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಗೋ ಬ್ಯಾಕ್ ಸಿಎಂ ಅಭಿಯಾನ ಪ್ರಾರಂಭ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಸಿಎಫ್ ನಂದಕುಮಾರ್ ಮಾತನಾಡಿ, ನಿಮ್ಮ ಬೇಡಿಕೆಗಳನ್ನು ಹಿರಿಯ ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಡಿಎಚ್ಒ ಡಾ . ವಿಶ್ವೇಶ್ವರಯ್ಯ ಮಾತನಾಡಿ, ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡಲು 13 ಕೋಟಿ ರೂ. ವೆಚ್ಚದಲ್ಲಿ ಕ್ರಿಯೆ ಯೋಜನೆ ರೂಪಿಸಲಾಗಿದ್ದು ಮುಖ್ಯಮಂತ್ರಿಗಳು ಮುಂದಿನ ತಿಂಗಳು ಭೂಮಿ ಪೂಜೆ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.
ತಾಲೂಕು ಅಧ್ಯಕ್ಷ ಅಂಗಡಿ ಕರಿಯಪ್ಪ , ಶಾಂತಕುಮಾರ್ , ಬೇಡ ಕೆಂಪಣ್ಣ ಸಮುದಾಯದ ಹಿರಿಯ ಮುಖಂಡ ಕೆವಿ ಮಾದೇಶ್ , ರೈತ ಸಂಘಟನೆಯ ಮಹದೇವಸ್ವಾಮಿ ನಾಗ ಕೆಂಪಯ್ಯ ಮಂಜುನಾಥ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.