ನ್ಯೂಡೆಲ್ಲಿ: ವಿಪಕ್ಷದ ಒಬ್ಬೊಬ್ಬ ನಾಯಕರನ್ನು ಒಂದೊಂದು ನೆಪದಲ್ಲಿ ಜೈಲಿಗೆ ಕಳುಹಿಸುವ ಕಷ್ಟವನ್ನು ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿದ್ದಾರೆ. ಅವರಿಗೆ ಸುಲಭವಾಗಲಿ ಎಂಬ ನಿಟ್ಟಿನಲ್ಲಿ ಪಕ್ಷದ ಎಲ್ಲ ಮುಖಂಡರು ಒಟ್ಟಾಗಿ ಬಂದಿದ್ದೇವೆ. ಧೈರ್ಯವಿದ್ದರೆ ನಮ್ಮೆಲ್ಲರನ್ನು ಒಟ್ಟಿಗೆ ಜೈಲಿಗೆ ಹಾಕಿ ಎಂದು ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಸವಾಲು ಹಾಕಿದರು.
ಎಎಪಿ ಮುಗಿಸಲು ಯತ್ನಿಸುತ್ತಿರುವ ಪ್ರಧಾನಿ ಮೋದಿ ನಿರಂಕುಶಪ್ರಭುತ್ವವನ್ನು ವಿರೋಧಿಸಿ ದೆಹಲಿ ಬಿಜೆಪಿ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕುವ ಪ್ರತಿಭಟನೆಯಲ್ಲಿ ರಾಜ್ಯ ಘಟಕದ ಮುಖಂಡರು ಹಾಗೂ ಕಾರ್ಯಕರ್ತರ ನೇತೃತ್ವ ವಹಿಸಿದ್ದ ಪೃಥ್ವಿ ರೆಡ್ಡಿ, ಎಎಪಿ ರಾಜಕೀಯ ಪಕ್ಷ ಮಾತ್ರವಲ್ಲ ಒಂದು ಪ್ರಬುದ್ಧ ವಿಚಾರ. ಆ ವಿಚಾರವನ್ನು ಎಂದಿಗೂ ಮುಗಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ಇನ್ನು ನಮ್ಮನ್ನು ಜೈಲಿನಲ್ಲಿಡಬಹುದು, ನಮ್ಮ ಬ್ಯಾಂಕ್ ಖಾತೆಗಳನ್ನು ತಡೆಹಿಡಿಯಬಹುದು, ಕಚೇರಿಯಿಂದ ಹೊರ ಹಾಕಬಹುದು. ಆದರೆ ಅರವಿಂದ ಕೇಜ್ರಿವಾಲ್ ಅವರು ಹುಟ್ಟುಹಾಕಿರುವ ವಿಚಾರವನ್ನು ಕೊನೆಗಾಣಿಸಲು ಸಾಧ್ಯವಿಲ್ಲ. ಕಾರಣ ಈಗಾಗಲೇ ಭಾರತೀಯ ಮನಸ್ಸಿನಲ್ಲಿ ಕೇಜ್ರಿವಾಲ್ ವಿಚಾರಗಳು ನಾಟಿವೆ ಎಂದು ಹೇಳಿದರು.
ದೇಶದ ಮತದಾರರು ನಮ್ಮ ಸರ್ಕಾರದ ಅಭಿವೃದ್ಧಿ ಪರ ಕೆಲಸಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇದನ್ನು ಸಹಿಸದ ಪ್ರಧಾನಿ ನರೇಂದ್ರ ಮೋದಿ ನಮ್ಮ ಪಕ್ಷವನ್ನು ಮುಗಿಸಲು ಕಳೆದ ಕೆಲವು ತಿಂಗಳಿಂದ ಹರಸಾಹಸ ಪಡುತ್ತಿದ್ದಾರೆ. ಕೆಲಸದ ವಿಚಾರದಲ್ಲಿ ನಮ್ಮ ಜತೆ ಸ್ಪರ್ಧಿಸಲು ಧೈರ್ಯವಿಲ್ಲದ ಮೋದಿ ವಾಮಮಾರ್ಗ ಹಿಡಿದಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಮೂರು ರೀತಿಯಲ್ಲಿ ನಮ್ಮ ಪಕ್ಷವನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ಮೊದಲನೆಯದಾಗಿ ನಮ್ಮ ಎಲ್ಲ ಪ್ರಮುಖ ನಾಯಕರನ್ನು ಜೈಲಿಗೆ ಕಳುಹಿಸುತ್ತಿದ್ದಾರೆ. ಎರಡನೇ ತಂತ್ರವಾಗಿ ನಮ್ಮ ಪಕ್ಷದ ಬ್ಯಾಂಕ್ ಅಕೌಂಟ್ ಫ್ರೀಜ್ ಮಾಡುವ ಪ್ರಯತ್ನ ನಡೆಸಿದ್ದಾರೆ. ಮೂರನೆಯದಾಗಿ ದೆಹಲಿಯ ಪ್ರಧಾನ ಕಚೇರಿಯಿಂದ ನಮ್ಮನ್ನು ಹೊರಹಾಕುವ ಸಂಚು ಹೂಡಿದ್ದಾರೆ. ಆದರೆ ಈ ಯಾವ ಪ್ರಯತ್ನಗಳು ಕೈಗೂಡುವುದಿಲ್ಲ ಎಂದು ಪೃಥ್ವಿ ರೆಡ್ಡಿ ಹೇಳಿದರು.
ಈ ಸಂದರ್ಭ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ, ರಾಜ್ಯ ಕಾರ್ಯದರ್ಶಿ ಉಷಾ ಮೋಹನ್, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ಅಶೋಕ್ ಮೃತ್ಯುಂಜಯ, ಸಂಚಿತ್ ಸೆಹವಾನಿ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.