NEWSಬೆಂಗಳೂರು

ಬಿಜೆಪಿ ಶಾಸಕರಿರೋ ಪ್ರದೇಶಗಳಲ್ಲಿ ಮಾತ್ರ ಮಳೆ ಅನಾಹುತ: ಡಿಸಿಎಂ ಡಿಕೆಶಿ ಆರೋಪ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಎಲ್ಲೆಲ್ಲಿ ಬಿಜೆಪಿ ಶಾಸಕರಿದ್ದಾರೋ ಆ ಪ್ರದೇಶಗಳಲ್ಲಿ ಮಾತ್ರ ಮಳೆ ಅನಾಹುತ ಸಮಸ್ಯೆ ಎದುರಾಗಿದೆ. ಅಂದರೆ, ಬಿಜೆಪಿಯವರು ಯಾವುದೇ ಕೆಲಸ ಮಾಡಿಲ್ಲ ಎಂಬುದಕ್ಕೆ ಸಾಕ್ಷಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಿಸಿದರು.

ಬುಧವಾರ ನಗರ ಪ್ರದಕ್ಷಿಣೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ಕಾಮಗಾರಿಗಳನ್ನು ಬೇಗ ಮುಗಿಸಿ ತಮ್ಮ ಕ್ಷೇತ್ರಗಳಲ್ಲಿನ ಸಮಸ್ಯೆ ಬಗೆಹರಿಸಿದ್ದಾರೆ. ಎಲ್ಲೆಲ್ಲಿ ಬಿಜೆಪಿ ಶಾಸಕರಿದ್ದಾರೋ ಆ ಪ್ರದೇಶಗಳಲ್ಲಿ ಮಾತ್ರ ಇಂತಹ ಸಮಸ್ಯೆ ಎದುರಾಗಿದೆ ಎಂದು ಹೇಳಿದರು.

ಇನ್ನು ಮಳೆಯಿಂದ ಬೆಂಗಳೂರಿಗೆ ಆಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಾಗುವುದು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಸಮಸ್ಯೆಗೆ ಪರಿಹಾರ ನೀಡುವ ಕೆಲಸವಾಗಿಲ್ಲ. ಆದರೂ ವಿಪಕ್ಷದವರು ಟೀಕೆ ಮಾಡಲಿ, ನಾವು ನಮ್ಮ ಕೆಲಸ ಮಾಡುತ್ತೇವೆ. ಅಂತಿಮವಾಗಿ ಟೀಕೆಗಳು ಸಾಯುತ್ತವೆ ಕೆಲಸಗಳು ಮಾತ್ರ ಉಳಿಯುತ್ತವೆ ಎಂದರು.

ಬೆಂಗಳೂರಿನಲ್ಲಿ ಮಳೆಯಿಂದಾಗಿರುವ ತೊಂದರೆ ಬಗ್ಗೆ ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ಒತ್ತುವರಿ ವಿಚಾರದಲ್ಲಿ ಅವರ ಕಾಲದಲ್ಲಿ ಏನು ಕೆಲಸ ಮಾಡುತ್ತಿದ್ದರು. ಒತ್ತುವರಿ ಮಾಡಿಕೊಂಡವರು ನ್ಯಾಯಾಲಯಗಳಿಂದ ತಡೆಯಾಜ್ಞೆ ತಂದಿದ್ದಾರೆ. ಆದರೂ ನಾನು ಒತ್ತುವರಿಗಳನ್ನು ತೆರವುಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಮಳೆ ನೀರಿನಿಂದ ತೊಂದರೆಗೆ ಒಳಗಾಗುತ್ತಿದ್ದ 211 ಪ್ರದೇಶಗಳನ್ನು ಗುರುತಿಸಿ 166ಕ್ಕೆ ಇಳಿಸಿದ್ದೇವೆ. ಇನ್ನು 44ರಲ್ಲಿ ಮಾತ್ರ ಕೆಲಸ ಬಾಕಿಯಿದ್ದು, ಇದರಲ್ಲಿ 24 ಕಡೆ ಕಾರ್ಯ ಪ್ರಗತಿಯಲ್ಲಿದೆ. ಮೊದಲಿಗಿಂತ ಈಗ ಸಮಸ್ಯೆಗಳನ್ನು ಎದುರಿಸುತ್ತಿರುವ ಪ್ರದೇಶಗಳ ಪ್ರಮಾಣ ಕಡಿಮೆಯಾಗಿದೆ. ಬೆಂಗಳೂರು ನಾಗರೀಕರನ್ನು ರಕ್ಷಣೆ ಮಾಡಲಾಗುವುದು. ಯಾರೂ ಆತಂಕಪಡುವ ಅಗತ್ಯವಿಲ್ಲ. ನಮ್ಮ ಸರ್ಕಾರ ಹಾಗೂ ಅಧಿಕಾರಿಗಳ ತಂಡ ಇದನ್ನು ಸರಿ ಮಾಡುತ್ತದೆ ಎಂದು ಭರವಸೆ ನೀಡಿದರು.

ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಕ್ಷೇತ್ರದಲ್ಲೂ ಪರಿಶೀಲನೆ ಮಾಡಿದ್ದೇವೆ. ಅವರು ಈ ಭಾಗದ ರಸ್ತೆ ಅಗಲೀಕರಣ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಈ ವಿಚಾರವಾಗಿ ಎಲ್ಲೆಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಸಮಸ್ಯೆಯಾಗಿದೆ, ಆ ಜಾಗಗಳ ಫೋಟೋ, ವಿಡಿಯೋ ಮಾಡಿಕೊಂಡು ತುರ್ತು ವರದಿ ಸಲ್ಲಿಕೆ ಮಾಡುವಂತೆ ತಿಳಿಸಿದ್ದೇನೆ. ಇನ್ನು ವಿಪತ್ತು ನಿರ್ವಹಣೆ ನಿಯಂತ್ರಣ ಅಡಿಯಲ್ಲಿ ರಸ್ತೆ ಅಗಲೀಕರಣ ಮಾಡಲಾಗುವುದು ಎಂದರು.

ಲಿಂಬಾವಳಿ ಅವರು 150 ಅಡಿ ರಸ್ತೆ ಬಗ್ಗೆ ಪ್ರಸ್ತಾವನೆ ಮಾಡಿದ್ದು, ಕೂಡಲೇ ಅಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು. ಇನ್ನು ಬಿಎಂಆರ್ ಡಿಎ ವತಿಯಿಂದ 150 ಅಡಿ ಹಾಗೂ 150 ಮೀಟರ್ ರಸ್ತೆಗೆ ಎರಡು ನೋಟಿಫಿಕೇಶನ್ ಆಗಿದ್ದು ಈ ವಿಚಾರವನ್ನು ಸಿಎಂ ಗಮನಕ್ಕೆ ತಂದಿದ್ದು, ಸದ್ಯದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು.

ಇನ್ನು ರಾಜಕಾಲು ಒತ್ತುವರಿ ತೆರವು ಕಾರ್ಯ ಶೇ.70 ರಷ್ಟು ಮುಗಿದಿದೆ. ಬಾಕಿ ಇರುವ ಒತ್ತುವರಿಯನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದರು.

Megha
the authorMegha

Leave a Reply

error: Content is protected !!