ನ್ಯೂಡೆಲ್ಲಿ: ದೆಹಲಿಯ 9ನೇ ಹಾಗೂ ನಾಲ್ಕನೇ ಮಹಿಳಾ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಇಂದು ಮಧ್ಯಾಹ್ನ ರಾಮಲೀಲಾ ಮೈದಾನದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಸಿಎಂ ಜತೆಗೆ ಅವರ ಸಚಿವ ಸಂಪುಟದ 6ಮಂದಿ ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇನ್ನು ಕಳೆದ 26 ವರ್ಷಗಳ ನಂತರ ದೆಹಲಿಯಲ್ಲಿ ಬಿಜೆಪಿ ಗದ್ದುಗೆಗೇರಿರುವುದರಿಂದ ರಾಮಲೀಲಾ ಮೈದಾನದಲ್ಲಿ ಈ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್, ಮಹಾರಾಷ್ಟ್ರ ಸಿಎಂ ಫಡ್ನವಿಸ್, ಸಚಿವ ರಾಜನಾಥ್ ಸಿಂಗ್ ಅಜಿತ್ ಪವಾರ್ ಸೇರಿದಂತೆ ಕೆಲ ಬಿಜೆಪಿ ರಾಜ್ಯಗಳ ಸಿಎಂಗಳು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.
ದೆಹಲಿ ವಿಧಾನಸಭೆಗೆ ಇದೇ ಮೊದಲ ಬಾರಿ ಶಾಸಕಿಯಾಗಿ ಆಯ್ಕೆ ಆಗಿರುವ 50 ವರ್ಷ ರೇಖಾ ಗುಪ್ತಾ ಾವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ಬುಧವಾರ ಘೋಷಿಸಿತ್ತು.
ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರನ್ನು ದೆಹಲಿ ವಿಧಾನಸಭೆಯ ಬಿಜೆಪಿ ಶಾಸಕಾಂಗ ನಾಯಕಿಯನ್ನಾಗಿ ಬುಧವಾರ ಆಯ್ಕೆ ಮಾಡಲಾಯಿತು. ಕೇಂದ್ರ ವೀಕ್ಷಕರಾದ ರವಿಶಂಕರ್ ಪ್ರಸಾದ್ ಮತ್ತು ಒ.ಪಿ. ಧನಕರ್ ಅವರ ಸಮ್ಮುಖದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೊಸದಾಗಿ ಆಯ್ಕೆಯಾದ ಎಲ್ಲ 48 ಬಿಜೆಪಿ ಶಾಸಕರು ಭಾಗವಹಿಸಿದ್ದರು. ಶಾಲಿಮಾರ್ ಬಾಗ್ ಶಾಸಕಿ ಆಗಿರುವ ರೇಖಾ ಗುಪ್ತಾ ಮತ್ತು ಅವರ ಸಂಪುಟ ಸಚಿವರು ಕೂಡ ಇಂದು ಪ್ರಮಾಣವಚನ ಸ್ವೀಕರಿಸಿದ್ದು ವಿಶೇಷವಾಗಿದೆ.
ಘಟಾನುಘಟಿಗಳ ಹಿಂದಿಕ್ಕಿದ ರೇಖಾ: ರೇಖಾ ಅವರಿಗಿಂತ ಆಪ್ ನಾಯಕ ಅರವಿಂದ ಕೇಜ್ರಿವಾಲ್ ಅವರನ್ನು ಸೋಲಿಸಿದ್ದ ಹಿರಿಯ ನಾಯಕ ಪರ್ವೇಶ್ ವರ್ಮಾ, ದೆಹಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದರ್ ಗುಪ್ತಾ ಮತ್ತು ಸತೀಶ್ ಉಪಾಧ್ಯಾಯ ಸೇರಿದಂತೆ ಹಲವಾರು ಪ್ರಮುಖ ಬಿಜೆಪಿ ನಾಯಕರು ಈ ಸಿಎಂ ಸ್ಪರ್ಧೆಯಲ್ಲಿದ್ದರು. ಪವನ್ ಶರ್ಮಾ, ಆಶಿಶ್ ಸೂದ್ ಮತ್ತು ಶಿಖಾ ರಾಯ್ ಸೇರಿದಂತೆ ಇತರ ಪ್ರಮುಖ ಹೆಸರುಗಳು ಕೇಳಿಬಂದಿದ್ದವು. ಅವರನ್ನೆಲ್ಲ ಹಿಂದಿಕ್ಕಿ ಮೊದಲ ಬಾರಿ ಶಾಸಕಿ ಆಗಿರುವ ರೇಖಾ ಆಯ್ಕೆ ಅಚ್ಚರಿ ಎಂಬಂತೆ ನಡೆಯಿತು.
ಇನ್ನು ಫೆ.5ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಶಾಲಿಮಾರ್ ಬಾಗ್ ಸ್ಥಾನದಿಂದ ಎಎಪಿ ಅಭ್ಯರ್ಥಿ ಬಂದನಾ ಕುಮಾರಿ ಅವರನ್ನು 29,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದರು. ಇದು ಅವರ ಮೊದಲ ವಿಧಾನಸಭಾ ಗೆಲುವಾಗಿತ್ತು.