CRIMELatestNEWSನಮ್ಮರಾಜ್ಯ

ಕನ್ನಡದ ಪ್ರಖ್ಯಾತ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಇನ್ನಿಲ್ಲ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕನ್ನಡಕ್ಕೆ ಅನೇಕ ಕವಿತೆಗಳು, ನಾಟಕಗಳು, ಸಾಹಿತ್ಯಗಳನ್ನು ಕೊಡುಗೆಯಾಗಿ ನೀಡಿದ್ದ ಕನ್ನಡದ ಪ್ರಖ್ಯಾತ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಇಂದು ಮುಂಜಾನೆ ವಿಧಿವಶರಾಗಿದ್ದಾರೆ.

ಇವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಎಚ್ಎಸ್‌ವಿ ಅಂತಲೇ ಚಿರಪರಿಚಿತರಾಗಿದ್ದ ಎಚ್.ಎಸ್.ವೆಂಕಟೇಶಮೂರ್ತಿ ಅವರು ಕೆಲದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.

ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಗ್ಗೆ 7 ಗಂಟೆಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರಿಗೆ ನಾಲ್ವರು ಪುತ್ರರಿದ್ದಾರೆ.

ಎಚ್.ಎಸ್​. ವೆಂಕಟೇಶಮೂರ್ತಿ ಸುಮಾರು 30 ವರ್ಷಗಳ ಕಾಲ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ‘ಕನ್ನಡದಲ್ಲಿ ಕಥನ ಕವನಗಳು’ ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದುಕೊಂಡಿದ್ದರು.

ಅಲ್ಲದೇ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮಕ್ಕಳಿಗಾಗಿ ಕವಿತೆ, ನಾಟಕ, ಕಥೆಗಳನ್ನೂ ಬರೆದಿದ್ದಾರೆ. ಇವರು ಅನುವಾದಿಸಿದ ಕಾಳಿದಾಸನ ‘ಋತುಸಂಹಾರ‘ ಕಾವ್ಯಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪುರಸ್ಕಾರವನ್ನು ಪಡೆದಿದೆ.

ಗಣ್ಯರ ಸಂತಾಪ:  ಎಚ್.ಡಿ.ಕುಮಾರಸ್ವಾಮಿ ಸಂತಾಪ: ಕನ್ನಡದ ಸಾರಸ್ವತ ಲೋಕದ ಸುಪ್ರಸಿದ್ಧ ಕವಿಗಳಾದ ಎಚ್.ಎಸ್. ವೆಂಕಟೇಶಮೂರ್ತಿ ಅವರ ನಿಧನದ ವಾರ್ತೆ ಕೇಳಿ ಬಹಳ ದುಃಖವಾಯಿತು. ಗದ್ಯ, ಕಾವ್ಯ, ನಾಟಕ, ಚಿತ್ರಗೀತೆ ಸೇರಿ ಅಕ್ಷರ ಜಗತ್ತಿಗೆ ಅನೇಕ ಆಯಾಮಗಳಲ್ಲಿ ಕನ್ನಡಕ್ಕೆ ಚಿರಸ್ಮರಣೀಯ ಕೊಡುಗೆ ನೀಡಿರುವ ಎಚ್ಎಸ್‌ವಿ ಅವರ ಅಗಲಿಕೆ ಬಹುದೊಡ್ಡ ನಷ್ಟ.

‘ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು..’ ದಂತಹ ಅನನ್ಯ ಭಾವಗೀತೆಯನ್ನು ರಚಿಸಿರುವ ಅವರನ್ನು ಮರೆಯಲು ಸಾಧ್ಯವೇ? ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ: ಹಿರಿಯ ಸಾಹಿತಿ ಎಚ್.ಎಸ್.ವೆಂಕಟೇಶ್ ಮೂರ್ತಿಯವರ ನಿಧನ ನೋವುಂಟುಮಾಡಿದೆ. ಕವಿತೆ, ನಾಟಕ, ಮಕ್ಕಳ ಸಾಹಿತ್ಯ, ಅನುವಾದ, ಪ್ರಬಂಧ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತೊಡಗಿಸಿಕೊಂಡು, ಅಪಾರ ಓದುಗ ಬಳಗ ಹೊಂದಿದ್ದ ವಿಶಿಷ್ಟ ಬರಹಗಾರ ವೆಂಕಟೇಶ ಮೂರ್ತಿಯವರ ಅಗಲಿಕೆಯಿಂದ ಸಾರಸ್ವತ ಲೋಕ ಬಡವಾಗಿದೆ.

ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ಪ್ರಾರ್ಥಿಸುತ್ತೇನೆ. ಅವರ ದುಃಖತಪ್ತ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಡಿಸಿಎಂ ಡಿಕೆಶಿ ಸಂತಾಪ: ನಗುತ ಹುಟ್ಟಿ ನಗುತ ಮುಗಿವ ನಗುವ ಹೂವೆ ಮಾದರಿ – ಎಚ್ಚೆಸ್ವಿ, ಭಾವಗೀತೆಗಳ ಮೂಲಕ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿದ ಹಿರಿಯ ಕವಿ ಎಚ್ಚೆಸ್ವಿ ಎಂದೇ ಜನಜನಿತರಾಗಿದ್ದ ಎಚ್.ಎಸ್.ವೆಂಕಟೇಶಮೂರ್ತಿ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು.

ಕಾದಂಬರಿ, ಕತೆ, ವಿಮರ್ಶೆ, ಕವನ, ಮಕ್ಕಳ ಸಾಹಿತ್ಯ, ಸಿನಿಮಾ ಸಾಹಿತ್ಯ, ರಂಗಭೂಮಿ ಹೀಗೆ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲೂ ಎಚ್ಚೆಸ್ವಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಿದ್ದರು. ಮೃತರ ಆತ್ಮಕ್ಕೆ ಸದ್ಗತಿ ದೊರಕಲಿ. ಅವರ ಅಪಾರ ಅಭಿಮಾನಿ ವರ್ಗಕ್ಕೆ, ಕುಟುಂಬಕ್ಕೆ, ಆಪ್ತರಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಭಾವಗಳ ಕವಿಗೆ ಭಾವಪೂರ್ಣ ವಿದಾಯ‌ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಸಂತಾಪ ಸೂಚಿಸಿದ್ದಾರೆ.

ಸಚಿವ ಎಚ್‌.ಸಿ.ಮಹದೇವಪ್ಪ ಸಂತಾಪ: ಕನ್ನಡದ ಖ್ಯಾತ ಕವಿಗಳು, ನಾಟಕ ರಚನೆಕಾರರು, ಸಾಹಿತಿಯಾಗಳೂ ಆಗಿದ್ದ ಎಚ್‌ ಎಸ್ ವೆಂಕಟೇಶ್ ಮೂರ್ತಿ ಅವರು ನಿಧನ ಹೊಂದಿದ್ದು ಅವರಿಗೆ ನನ್ನ ಭಾವಪೂರ್ಣ ನಮನಗಳು.

ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ಅವರ ಕುಟುಂಬ ವರ್ಗದವರಿಗೆ ದೊರೆಯಲಿ ಎಂದು ಈ ವೇಳೆ ಪ್ರಾರ್ಥಿಸುವೆನು ಎಂದು ಸಚಿವ ಎಚ್‌.ಸಿ.ಮಹದೇವಪ್ಪ ಸಂತಾಪ ಸೂಚಿಸಿದ್ದಾರೆ.

Megha
the authorMegha

Leave a Reply

error: Content is protected !!