ಮೈಸೂರು: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲು ಇಂದು ಮಧ್ಯಾಹ್ನದ ವೇಳೆಗೆ ಮೈಸೂರಿಗೆ ಆಗಮಿಸಲಿದ್ದಾರೆ. ಅವರ ಜೊತೆ ಪ್ರಿಯಾಂಕ ಗಾಂಧಿ ಕೂಡ ಬರುತ್ತಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಸೋನಿಯಾ ಮತ್ತು ಪ್ರಿಯಾಂಕ ಆಗಮಿಸಲಿದ್ದು, ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗುವುದು ಎಂದು ಪಕ್ಷದ ಜಿಲ್ಲಾ ಮುಖಂಡರು ತಿಳಿಸಿದ್ದಾರೆ.
ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಆರಂಭವಾದ ಪಾದಯಾತ್ರೆ ಈಗ ಮೈಸೂರಿಗೆ ತಲುಪಿದ್ದು ಇದೇ ಮೊದಲ ಬಾರಿಗೆ ಸೋನಿಯಾ ಗಾಂಧಿ ಯಾತ್ರೆಯಲ್ಲಿ ಭಾಗಿಯಾಗುತ್ತಿದ್ದಾರೆ. ಇನ್ನು ಯಾತ್ರೆಯಲ್ಲಿ ಭಾಗಿಯಾಗುವ ಮುನ್ನ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ವಿಮಾನ ನಿಲ್ದಾಣದಿಂದ ನೇರವಾಗಿ ಚಾಮುಂಡಿಬೆಟ್ಟಕ್ಕೆ ತೆರಳುವ ಸಾಧ್ಯತೆ ಇದೆ.
ಮತ್ತೆ ಹೆಲಿಕಾಫ್ಟರ್ ಮೂಲಕ ಕೊಡಗಿಗೆ ತೆರಳಲಿದ್ದಾರೆ. ಮಡಿಕೇರಿ ತಾಲೂಕಿನ ಮೇಕೇರಿ ಗ್ರಾಮದಲ್ಲಿರುವ ಕೂರ್ಗ್ ವೈಲ್ಡರ್‌ನೆಸ್ ರೆಸಾರ್ಟ್ ನಲ್ಲಿ ಸೋನಿಯಾ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. ಅಲ್ಲಿ ಎರಡು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಇನ್ನು ಸಂಜೆ ವೇಳೆಗೆ ರಾಹುಲ್ ಗಾಂಧಿ ಕೂಡ ಕೊಡಗಿಗೆ ಹೋಗಿ ಕುಟುಂಬದ ಜೊತೆ ಎರಡು ದಿನ ಇರಲಿದ್ದಾರೆ.
ಅಕ್ಟೋಬರ್ 6 ರಂದು ಮಂಡ್ಯದಲ್ಲಿ ಐಕ್ಯತಾ ರ‍್ಯಾಲಿಯಲ್ಲಿ ರಾಹುಲ್, ಪ್ರಿಯಾಂಕ ಭಾಗಿಯಾಗಲಿದ್ದಾರೆ. ಒಂದು ದಿನದ ಪಾದಯಾತ್ರೆ ನಂತರ ಪ್ರಿಯಾಂಕ ವಾಪಸ್ ಕೊಡಗಿಗೆ ತೆರಳಲಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಭೇಟಿಯ ಉಸ್ತುವಾರಿಯನ್ನು ಎ.ಎಸ್. ಪೊನ್ನಣ್ಣ ವಹಿಸಿಕೊಂಡಿದ್ದಾರೆ.