NEWSಕೃಷಿದೇಶ-ವಿದೇಶನಮ್ಮರಾಜ್ಯ

ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಸರ್ಕಾರವು ಕಬ್ಬು ಬೇಸಾಯದಲ್ಲಿ ಎಐ ತಂತ್ರಜ್ಞಾನ ಜಾರಿಗೆ ತರಲಿ: ಕುರುಬೂರು ಶಾಂತಕುಮಾರ್

ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ಕಬ್ಬು ಬೇಸಾಯದಲ್ಲಿ ಎಐ ತಂತ್ರಜ್ಞಾನ ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಸರ್ಕಾರವು ಜಾರಿಗೆ ತರಬೇಕು ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ಅಧ್ಯಯನ ನಡೆಸಲು ನಿನ್ನೆ ಮಹಾರಾಷ್ಟ್ರ ರಾಜ್ಯದ ಬಾರಮತಿ ಕೃಷಿ ವಿಜ್ಞಾನ ಕೇಂದ್ರಕ್ಕೆ ನಮ್ಮ ಸಂಘಟನೆಯ 16 ರೈತರ ತಂಡ ಅಧ್ಯಯನಕ್ಕೆ ಹೋಗಿತ್ತು ಎಂದು ಬೆಳಗಾವಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ಎರಡು ವರ್ಷಗಳಿಂದ ಮಹಾರಾಷ್ಟ್ರ ರಾಜ್ಯದಲ್ಲಿ ಐದು ಸಾವಿರಕ್ಕೂ ಹೆಚ್ಚು ರೈತರು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕಬ್ಬು ಬೇಸಾಯ ಮಾಡುತ್ತಿರುವ ಕಾರಣ ಪ್ರತಿ ಎಕರೆಗೆ 50ರಷ್ಟು ಹೆಚ್ಚು ಇಳುವರಿ ಪಡೆಯುತ್ತಿದ್ದು ಬೇಸಾಯದ ಖರ್ಚು ಕೂಡ ಕಡಿಮೆಯಾಗಿದೆ, ಇದರಿಂದ ರೈತರಿಗೆ ಹೆಚ್ಚು ಲಾಭ ಬರುತ್ತಿದೆ ಎಂದು ಹೇಳಿದರು.

AI ತಂತ್ರಜ್ಞಾನ ಅಳವಡಿಸಿಕೊಳ್ಳುವ ರೈತರಿಗೆ ಪ್ರತಿ ಹೆಕ್ಟರಿಗೆ 25,000 ರೂ. ಖರ್ಚು ಬರುತ್ತದೆ. ಇದರಲ್ಲಿ ಮಹಾರಾಷ್ಟ್ರ ರಾಜ್ಯ ಸರ್ಕಾರ 18000 ರೂ. ಸಹಾಯಧನ ಕೊಡುತ್ತಿದೆ. ಉಳಿದ 7 ಸಾವಿರ ರೂ.ಗಳನ್ನು ಆಯಾ ಭಾಗದ ಸಕ್ಕರೆ ಕಾರ್ಖಾನೆಗಳು ಬರಿಸುತ್ತಿವೆ. ಇದೇ ಮಾದರಿ ಕರ್ನಾಟಕ ಸರ್ಕಾರವು ಜಾರಿಗೆ ತರಬೇಕು ಎಂದು ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.

ಇನ್ನು ರಾಜ್ಯದಲ್ಲಿ 50ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿನ ಹಣ ಪಾವತಿ ಮಾಡಿಲ್ಲ. ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳಿಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಕ್ಕರೆ ನಿಯಂತ್ರಣ ಕಾಯ್ದೆ ಅನ್ವಯ ಕಂದಾಯ ವಸೂಲಿ ಬಾಕಿ. ಆರ್‌.ಸಿ. ನಿಯಮದಂತೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಕ್ಕರೆ ಗೋದಾಮು ಜಪ್ತಿ ಮಾಡಿ ರೈತರ ಹಣ ಕೊಡಿಸಲಿ ಎಂದು ಆಗ್ರಹಿಸಿದರು.

2025-26 ರಲ್ಲಿ ರಾಜ್ಯದ 80 ಸಕ್ಕರೆ ಕಾರ್ಖಾನೆಗಳು 5 ಕೋಟಿ 75 ಲಕ್ಷ ಕಬ್ಬು ನುರಿಸಿವೆ ಈ ಬಾಬ್ತು ರೈತರಿಗೆ 3000 ಕೋಟಿ ರೂ. ಕಬ್ಬಿನ ಹಣ ಬಾಕಿ ಇದೆ ಎಂದು ತಿಳಿಸಿದರು.

ಅಲ್ಲದೆ ಕಬ್ಬು, ಬತ್ತ, ಜೋಳ ಬೆಳೆಗಳಿಂದ ಎಥನಾಲ್ ಉತ್ಪಾದನೆ ಮಾಡಿ ಮಾರಾಟ ಮಾಡುವ ತಂತ್ರಜ್ಞಾನ ರೈತರಿಗೆ ನೀಡಿ, ಇದರಿಂದ ರೈತರಿಗೆ ಹೆಚ್ಚು ಲಾಭ ಸಿಗುತ್ತದೆ. ಅಡುಗೆ ಅನಿಲ (ಗ್ಯಾಸ್) ಸಮಸ್ಯೆ ಬಗೆಹರಿಯುತ್ತದೆ. ಎಥನಾಲ್ ಬಳಕೆಯಿಂದ ಪರಿಸರ ಸಂರಕ್ಷಣೆಯಾಗುತ್ತದೆ. ವಿದೇಶಿ ವಿನಿಮಯ ಉಳಿಯುತ್ತದೆ. ಇದರ ಜತೆಗೆ ರೈತರ ಆದಾಯವೂ ದುಪ್ಪಟ್ಟಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಬೆಳಗಾಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಹಿರೇಮಠ, ಎಸ್.ಬಿ. ಸಿದ್ನಾಳ್, ರಾಜ್ಯ ಉಪಾಧ್ಯಕ್ಷ ಎನ್.ಎಚ್.ದೇವಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ್ ಎತ್ತಿನಗುಡ್ಡ, ಬರಡನಪುರ ನಾಗರಾಜ್, ಬಾಪುಗೌಡ ಬಸವನಗೌಡ ಪಾಟೀಲ್, ವೀರಣ್ಣಗೌಡ, ಶಿವಪ್ಪ ಭೈರೂಜಿ ಇತರರು ಇದ್ದರು.

 

Deva
the authorDeva

Leave a Reply

error: Content is protected !!
Latest news
ಸರ್ಕಾರಿ ನೌಕರ ಪರೋಕ್ಷವಾಗಿ ಬೇರೊಬ್ಬರ ಮೂಲಕ ಲಂಚ ಪಡೆದರೂ ಆತ ತಪ್ಪಿತಸ್ಥನೆ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ಇಂದಿನಿಂದ ಜಾರಿ: ಕರೆಂಟ್‌ ಬಿಲ್‌ಕೊಟ್ಟ ದಿನದಿಂದ ರಜೆ ಹೊರತುಪಡಿಸಿ ಕನಿಷ್ಠ 15 ದಿನಗಳ ಪಾವತಿ ಅವಧಿ ಕಡ್ಡಾಯ ಸರ್ಕಾರಿ ಸಾರಿಗೆ ಚಾಲನಾ, ತಾಂತ್ರಿಕಾ ಸಿಬ್ಬಂದಿ ಕಾರ್ಮಿಕರಲ್ಲ: “ಸಂಸ್ಥೆ ನಿಯಮಗಳ ಮೂಲಕ ಯಾರು ನೇಮಕವಾಗಿದ್ದಾರೋ ಅವರೇ ಅ... ನಾಲ್ಕೂ ರಸ್ತೆ ಸಾರಿಗೆ ಸಂಸ್ಥೆ ಎಂಡಿಗಳಿಗೆ ಪತ್ರ ಬರೆದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಾಳೆ ವೇತನ ಹೆಚ್ಚಳದ 11 ತಿಂಗಳ ಹಿಂಬಾಕಿಯ ವ್ಯತ್ಯಾಸ ತಿಳಿಯಲು ಸಾರಿಗೆ ನೌಕರರಿಂದ NWKRTC ಎಂಡಿ ಭೇಟಿ GBA East ತ್ಯಾಜ್ಯ ವಿಲೇವಾರಿ ಅಕ್ರಮ: 6 ವಾಹನಗಳ ವಶ- FIR ದಾಖಲು NWKRTC: ಧಾರವಾಡ ಗ್ರಾ.ವಿಭಾಗದ ನಿವೃತ್ತ ಅಧಿಕಾರಿಗಳಿಗೆ ಹೃದಯಸ್ಪರ್ಷಿ ಬೀಳ್ಕೊಡುಗೆ KSRTC: ಮೂರು ದಶಕಗಳ ಸುದೀರ್ಘ ಸೇವೆ ಬಳಿಕ ಸಂಸ್ಥೆಯ ಬಸ್‌ ಚಾಲಕ ನಿವೃತ್ತಿ-  ಮರೆಯಲಾಗದ ಸಂದರ್ಭ ಸೆರೆ! ಇಂಧನ, ಗ್ಯಾಸ್ ಬೆಲೆಯೇರಿಕೆ, ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾರೈಸಂ ಪ್ರತಿಭಟನೆ -ಸರ್ಕಾರಗಳ ವಿರುದ್ಧ ಘೋಷಣೆ KKRTC: ಬಸ್ ನಿಲ್ದಾಣದಲ್ಲಿ ಮಹಿಳೆ ಜತೆ ಅನುಚಿತ ವರ್ತನೆ-ಕಿಡಿಗೇಡಿಗೆ ಚಪ್ಪಲಿ ಏಟು