ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಆದರೆ, ಬಿಜೆಪಿಯಿಂದಲ್ಲ: ಮುತಾಲಿಕ್
ಧಾರವಾಡ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಆದರೆ, ಬಿಜೆಪಿಯವರು ಟಿಕೆಟ್ ಕೊಡಲು ಬಂದರೂ ನಾನು ಪಡೆದುಕೊಳ್ಳುವುದಿಲ್ಲ. ಸ್ವತಂತ್ರನಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಏಳೆಂಟು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವುದಕ್ಕಾಗಿ ಹಿಂದೂ ಕಾರ್ಯಕರ್ತರು ಮನವಿ ಮಾಡಿದ್ದು, ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂಬುದನ್ನು ಶೀಘ್ರವೇ ಬಹಿರಂಗಪಡಿಸುತ್ತೇನೆ ಎಂದು ತಿಳಿಸಿದರು.
ಬೆಳಗಾವಿ ನಗರದ ಎರಡೂ ಕ್ಷೇತ್ರ, ತೇರದಾಳ, ಜಮಖಂಡಿ, ಕಾರ್ಕಳ, ಉಡುಪಿ, ಶೃಂಗೇರಿ, ಪುತ್ತೂರಿನಿಂದ ಸ್ಪರ್ಧೆ ಮಾಡುವುದಕ್ಕಾಗಿ ಕಾರ್ಯಕರ್ತರು ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರು ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಬರುವ ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದು ಖಚಿತ ಎಂದರು.
ಇನ್ನು ಯಾವ ಕ್ಷೇತ್ರ ಎನ್ನುವುದನ್ನು ಶೀಘ್ರ ಬಹಿರಂಗಪಡಿಸುತ್ತೇವೆ. ಬಿಜೆಪಿಯಿಂದ ನನಗೆ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆಯಲಿಲ್ಲ. 2014ರಿಂದಲೂ ನಾನು ಬಿಜೆಪಿ ಮೇಲೆ ಆಸೆ ಇಟ್ಟಿದ್ದೆ. ಆದರೆ, ಅವರು ಸಕಾರಾತ್ಮಕವಾಗಿ ಸ್ಪಂದನೆ ನೀಡಲಿಲ್ಲ. ಹೀಗಾಗಿ ಮುಂದೆ ಬಿಜೆಪಿಯವರು ಟಿಕೆಟ್ ಕೊಡಲು ಬಂದರೂ ನಾನು ತಿರಸ್ಕರಿಸುತ್ತೇನೆ. ಸ್ವತಂತ್ರನಾಗಿ ಸ್ಪರ್ಧೆ ಮಾಡುವೆ ಎಂದು ಸ್ಪಷ್ಟಪಡಿಸಿದ್ದಾರೆ.
ಹಿಂದೂ ಕಾರ್ಯಕರ್ತರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ನೋಡಿ ಈ ತೀರ್ಮಾನಕ್ಕೆ ಬಂದಿದ್ದೇನೆ. ಕಾರ್ಯಕರ್ತರ ಆಸೆಯೂ ಇದೇ ಆಗಿದೆ. ನಾನು ಕಟ್ಟ ಹಿಂದೂ ಆಗಿರುವುದರಿಂದ ಕಾಂಗ್ರೆಸ್, ಜೆಡಿಎಸ್ನವರು ನನಗೆ ಟಿಕೆಟ್ ಕೊಡುವ ಪ್ರಶ್ನೆಯೇ ಇಲ್ಲ. ನಾನು ಪಕ್ಷವನ್ನೂ ಕಟ್ಟುವುದಿಲ್ಲ. ಚುನಾವಣೆಯಲ್ಲಿ ಗೆಲುವು ಸಾಧಿಸಿದರೂ ನಾನು ಹಿಂದೂ ತತ್ವ ಸಿದ್ಧಾಂತದ ಮೇಲೆ ಇರುವ ಬಿಜೆಪಿಗೆ ಬೆಂಬಲ ಸೂಚಿಸುತ್ತೇನೆ ಎಂದು ಹೇಳಿದರು.