NEWSನಮ್ಮರಾಜ್ಯ

ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಿ: ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ವಸ್ತ್ರದ್ ಸಲಹೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಸ್ವೀಪ್ ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ಕೈಗೊಳ್ಳುವ ಮೂಲಕ ಮತದಾರರಿಗೆ ಜಾಗೃತಿ ಮೂಡಿಸಿ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್ ವಸ್ತ್ರದ್ ಹೇಳಿದರು.

ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಸ್ವೀಪ್ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎನ್ನುವುದು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಮತದಾನದಿಂದ ಒಬ್ಬ ಉತ್ತಮ ನಾಯಕನನ್ನು ಆಯ್ಕೆ ಮಾಡಬಹುದು. ನಮ್ಮ ದೇಶ ವಿವಿಧತೆಯಲ್ಲಿ ಏಕತೆಯಿಂದ ಕೂಡಿದ್ದು ಎಲ್ಲಾ ವರ್ಗದವರಿಗೂ ಮತದಾನ ಮಾಡುವ ಸಾಮಾನ ಹಕ್ಕು ನೀಡಲಾಗಿದೆ. ಹಾಗಾಗಿ ಅರ್ಹ ಮತದಾರರು ಯಾರು ಕೂಡ ಮತದಾನದಿಂದ ವಂಚಿತರಾಗಬಾರದು.

ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಮತದಾರರ ಭಾಗವಹಿಸುವಿಕೆ(ಸ್ವೀಪ್) ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಕೈಗೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಮತದಾನ ಪ್ರಕ್ರಿಯೆಯಲ್ಲಿ ಮೂರು ಮುಖ್ಯ ಅಂಶಗಳನ್ನು ಗಮನದಲ್ಲಿರಿಸಿ ಮತದಾರರ ಗುರುತಿನ ಚೀಟಿ ಮಾಡಿಸಲು ನೋಂದಣಿ ಪ್ರಕ್ರಿಯೆ ಪ್ರಮುಖ ಪಾತ್ರ ವಹಿಸುತ್ತದೆ. ದಾಖಲೆ ಸರಿಯಾಗಿದೆಯೇ, ವಿಳಾಸ, ವಯಸ್ಸು, ಎಲ್ಲವನ್ನೂ ಸರಿಯಾದ ರೀತಿಯಲ್ಲಿ ಪರಿಶೀಲಿಸಬೇಕು.

ಇನ್ನು ಎರಡನೇಯದಾಗಿ ಮತದಾನಕ್ಕೆ ಬಳಸುವ ಇವಿಎಂ ಮಿಷನ್‌ಗಳ ಬಗ್ಗೆ ಹಲವರು ವಿಭಿನ್ನ ಅಭಿಪ್ರಾಯ, ಅನಿಸಿಕೆಗಳನ್ನು ಹೇಳುವರು. ಅಂತಹ ಅಭಿಪ್ರಾಯಗಳಿಗೆ ಉತ್ತರಿಸುವ, ವಿವರಿಸುವ ಮಾಹಿತಿ ಅಧಿಕಾರಿಗಳಲ್ಲಿ ಇರಬೇಕು. ಮೂರನೆಯದಾಗಿ ಸಹಾಯವಾಣಿ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಗುರುತಿನ ಚೀಟಿಯ ತಿದ್ದುಪಡಿ, ಹೊಸ ಕಾರ್ಡ್ ಪಡೆಯುವುದು ಹಾಗೂ ಇನ್ನಿತರೆ ಮತದಾನಕ್ಕೆ ಸಂಬಂಧಿಸಿದ ದೂರು, ಸಲಹೆಗಳಿಗೆ 1950 ಸಂಖ್ಯೆ ಸಂಪರ್ಕಿಸುವುದು. ಇವುಗಳ ಬಗ್ಗೆ ಅಧಿಕಾರಿಗಳು ತಿಳಿದಿರಬೇಕು.

ಮತದಾನ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಾಲಯ, ಅಂಗವಿಕಲರಿಗೆ ರ್ಯಾಂಪ್ ಸೇರಿದಂತೆ ಸುಸಜ್ಜಿತ ಮೂಲಭೂತ ಸೌಕರ್ಯ ಇರುವುದನ್ನು ಖಚಿತ ಪಡಿಸಿಕೊಳ್ಳಿ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಡಾ.ಕೆ.ಎನ್ ಅನುರಾಧ, ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಜಿ.ಪಂ ಯೋಜನಾಧಿಕಾರಿ ರಾಮಕೃಷ್ಣಯ್ಯ, ಯೋಜನಾ ನಿರ್ದೇಶಕ ವಿಠಲ್ ಕಾವ್ಳೆ, ಮುಖ್ಯ ಲೆಕ್ಕಾಧಿಕಾರಿ ಮಂಜುನಾಥ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Megha
the authorMegha

Leave a Reply

error: Content is protected !!