ಬೆಂಗಳೂರು: ಅರಮನೆ ಮೈದಾನದಲ್ಲಿ ಇಂದು ಆಯೋಜನೆಗೊಳ್ಳುತ್ತಿರುವ ಪುನೀತ ಪರ್ವ ಸಮಾರಂಭಕ್ಕೆ ಆಗಮಿಸುತಿರುವ ಅಪ್ಪು ಅಭಿಮಾನಿಗಳಿಗಾಗಿ ಬೆಳಗ್ಗೆ ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು.
ನೂರಾರು ಕಿಮೀ ದೂರದ ಊರುಗಳಿಂದ ಅಭಿಮಾನಿಗಳು ಬಂದಿರುವುದರಿಂದ ಅವರಿಗಾಗಿ ಕೇಸರಿ ಬಾತ್ ಮತ್ತು ಉಪ್ಪಿಟ್ಟು ಸಿದ್ಧಪಡಿಸಿ ಕೊಡಲಾಯಿತು. ಅದರಂತೆ ಪೊಲೀಸ್ ಸಿಬ್ಬಂದಿ ಮತ್ತು ಕಾರ್ಯಕ್ರಮದ ಸಿಬ್ಬಂದಿಗೆ ಮೊಸರನ್ನ, ಬಿಸಿಬೇಳೆ ಬಾತ್ ಮತ್ತು ಬೊಂಡಾ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ತಮ್ಮ ನೆಚ್ಚಿನ ನಟನ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ರಾಜ್ಯಾದ ನಾನಾ ಜಿಲ್ಲೆಗಳಿಂದ ಅಭಿಮಾನಿಗಳು ಬೆಂಗಳೂರಿಗೆ ಆಗಮಿಸಿದ್ದು, ತಡರಾತ್ರಿವರೆಗೂ ಕಾರ್ಯಕ್ರಮ ವೀಕ್ಷಿಸಲಿದ್ದಾರೆ. ಹಾಗಾಗಿಯೇ ಅವರಿಗೆ ನೀರು, ತಿಂಡಿ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಮಾಡಿದೆ ದೊಡ್ಮನೆ.
ವಾರದಿಂದಲೇ ಈ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ಮಾಡಲಾಗಿದ್ದು, ಗಣ್ಯರಿಗೆ ಮತ್ತು ಅಭಿಮಾನಿಗಳಿಗೆ ಕೂರಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಇನ್ನು ಈ ಪುನೀತ ಪರ್ವ ಕಾರ್ಯಕ್ರಮಕ್ಕೆ ಬರಲಿರುವ ರಮ್ಯಾ, ಪ್ರಭುದೇವ ಸೇರಿದಂತೆ ಅನೇಕ ತಾರೆಯರು ನೃತ್ಯ ಮಾಡಲಿದ್ದಾರೆ. ಪುನೀತ್ ರಾಜ್ ಕುಮಾರ್ ನಟನೆಯ ಸಿನಿಮಾಗಳ ಗೀತೆಗಳಿಗೆ ತಾರೆಯರು ಹೆಜ್ಜೆ ಹಾಕಲಿದ್ದಾರೆ.
ಈಗಾಗಲೇ ಅರಮನೆ ಮೈದಾನ ಸಿದ್ಧಗೊಂಡಿದ್ದು, ಕನ್ನಡ ಸಿನಿ ತಾರೆಯರು ಭಾಗಿ ಆಗುತ್ತಿದ್ದಾರೆ. ಅಷ್ಟೇ ಅಲ್ಲ ಖ್ಯಾತಗಾಯಕರಾದ ವಿಜಯ್ ಪ್ರಕಾಶ್, ಗುರುಕಿರಣ್ ಸೇರಿದಂತೆ ಅನೇಕ ಗಾಯಕರು ಈ ಕಾರ್ಯಕ್ರಮದಲ್ಲಿ ಪುನೀತ್ ನಟನೆಯ ಹಾಡುಗಳಿಗೆ ಮತ್ತೆ ಜೀವ ತುಂಬಲಿದ್ದಾರೆ.
ಪುನೀತ್ ರಾಜ್ ಕುಮಾರ್ ನೆನಪಿನಲ್ಲಿ ‘ಪುನೀತ ಪರ್ವ’ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಐದುನೂರಕ್ಕೂ ಹೆಚ್ಚು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗುವ ಸಾಧ್ಯತೆ ಇದೆ. ಹೀಗಾಗಿ ಪುನೀತ್ ರಾಜ್ ಕುಮಾರ್ ಅವರನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವ ಬಹೃತ್ ಸಮಾರಂಭ ಇದಾಗಿದೆ.
ಪುನೀತ್ ನಟನೆಯ ಕಟ್ಟಕಡೆಯ ಡಾಕ್ಯುಮೆಂಟರಿ ಮಾದರಿಯ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಕೂಡ ಇದಾಗಿದ್ದು, ಭಾರತೀಯ ಸಿನಿಮಾ ರಂಗದ ಅನೇಕ ದಿಗ್ಗಜರು ಸಮಾರಂಭದಲ್ಲಿ ಭಾಗಿ ಆಗುತ್ತಿದ್ದಾರೆ. ಅಲ್ಲದೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಆಹ್ವಾನ ನೀಡಲಾಗಿದೆ.