ರಸ್ತೆಗುಂಡಿಗಳ ಮುಚ್ಚಿಸುವ ಯೋಗ್ಯತೆ ಇಲ್ಲದ ನಿರ್ಲಜ್ಜ ಸರ್ಕಾರ : ಎಎಪಿ ಪ್ರತಿಭಟನೆ
ರಸ್ತೆ ಗುಂಡಿಗೆ ಮತ್ತೆರಡು ಬಲಿ - ಖಂಡಿಸಿ ಪ್ರತಿಭಟನೆ ನಡೆಸಿದ ಎಎಪಿ ಮುಖಂಡರ ಬಂಧನ
ಬೆಂಗಳೂರು: ರಾಜ್ಯ ರಾಜಧಾನಿಯ ಅಟ್ಟೂರು ಬಡಾವಣೆ ಹಾಗೂ ರಾಜಾನುಕುಂಟೆಯಲ್ಲಿ ಯುವಕರಿಬ್ಬರು ರಸ್ತೆ ಗುಂಡಿಯಿಂದ ಸಂಭವಿಸಿದ ಅಪಘಾತಕ್ಕೆ ಬಲಿಯಾಗಿರವುದನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಬಳಿಕ ಅಲ್ಲಿಂದ ಮೆರವಣಿಗೆ ಹೊರಟು ಬಿಬಿಎಂಪಿ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಲು ಯೋಜನೆ ರೂಪಿಸಿದ್ದ ಎಎಪಿ ಕಾರ್ಯಕರ್ತರನ್ನು ಪೊಲೀಸರು ಮಧ್ಯದಲ್ಲೇ ತಡೆದು ಬಂಧಿಸಿದರು.
ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಎಎಪಿ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ, “ಬೆಂಗಳೂರಿನಲ್ಲಿ ರಸ್ತೆಗುಂಡಿಗೆ ಜನರು ಸಾಯುತ್ತಿರುವುದು ಕೇವಲ ಬಲಿಯಲ್ಲ. ಇದು ಸರ್ಕಾರಿ ಪ್ರಾಯೋಜಿತ ಕಗ್ಗೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆಗುಂಡಿಗಳನ್ನು ಮುಚ್ಚಿಸುವ ಯೋಗ್ಯತೆಯಿಲ್ಲದ ನಿರ್ಲಜ್ಜ ಸರ್ಕಾರವು ಅಮಾಯಕ ಜೀವಗಳನ್ನು ಈ ರೀತಿ ಕೊಲೆ ಮಾಡಿ ವಿಕೃತಿ ಮೆರೆಯುತ್ತಿದೆ. ಬಿಬಿಎಂಪಿ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವುದಕ್ಕೆ ಬೆರಳೆಣಿಕೆಯ ದಿನಗಳಿದ್ದಾಗ ಮಾತ್ರ ರಸ್ತೆಗುಂಡಿಗಳನ್ನು ಕಳಪೆ ಕಾಮಗಾರಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಿ ಮತದಾರರನ್ನು ವಂಚಿಸಲು ಸರ್ಕಾರ ನಿರ್ಧರಿಸಿದೆ” ಎಂದು ಹೇಳಿದರು.
“ಬೆಂಗಳೂರಿನಲ್ಲಿ ರಸ್ತೆಗುಂಡಿಯಿಂದಾಗಿ ಅಪಘಾತವಾಗುವುದು ಸಾಮಾನ್ಯವಾಗಿದೆ. ತಿಂಗಳಿಗೆ ಕನಿಷ್ಠ ಮೂರ್ನಾಲ್ಕು ಮಂದಿಯಾದರೂ ಜೀವ ಕಳೆದುಕೊಳ್ಳುತ್ತಿದ್ದಾರೆ. ಜೀರೋ ಟ್ರಾಫಿಕ್‌ನಲ್ಲಿ ತಿರುಗಾಡುವ ಮುಖ್ಯಮಂತ್ರಿಯವರಿಗೆ ಹಾಗೂ ಸದಾ ಕಾರಿನಲ್ಲೇ ತಿರುಗಾಡುವ ಸಚಿವರು ಹಾಗೂ ಶಾಸಕರಿಗೆ ಬೈಕ್ ಸವಾರರ ಕಷ್ಟ ಅರ್ಥವಾಗುತ್ತಿಲ್ಲ ಎಂದು ಕಿಡಿಕಾರಿದರು.
ಇನ್ನು ಕೇಳಿದಷ್ಟು ಕಮಿಷನ್ ಕೊಡಲು ಗುತ್ತಿಗೆದಾರರು ಒಪ್ಪದ ಕಾರಣಕ್ಕೆ ರಸ್ತೆ ಕಾಮಗಾರಿಗೆ ಹಣ ಬಿಡುಗಡೆ ಮಾಡಲೂ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಇಂತಹ ಹಣಬಾಕ ಸರ್ಕಾರವನ್ನು ರಾಜ್ಯ ಹಿಂದೆಂದೂ ಕಂಡಿರಲಿಲ್ಲ ಎಂದು ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.
“ಮತದಾನದ ದಿನ ಗುಂಡಿ ಮುಚ್ಚಲ್ಪಟ್ಟಿದ್ದರೆ ಜನರು ಬಿಜೆಪಿಗೆ ಮತ ನೀಡುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭಾವಿಸಿದ್ದಾರೆ. ಆದರೆ ಜನರು ಎಚ್ಚೆತ್ತುಕೊಂಡು ಮುಂಬರುವ ಚುನಾವಣೆಗಳಲ್ಲಿ ಭ್ರಷ್ಟ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ರಸ್ತೆಗುಂಡಿಯಿಂದಾಗಿ ಸಂಭವಿಸಿದ ಒಂದೊಂದು ಅಪಘಾತವೂ ಬಿಜೆಪಿ ವಿರುದ್ಧ ಮತ ಚಲಾಯಿಸಲು ಪ್ರೇರಣೆ ಆಗಬೇಕು ಎಂದು ಹೇಳಿದರು.
ಇನ್ನು ನಾನಾ ರೀತಿಯ ತೆರಿಗೆ ಕಟ್ಟುವ ಜನರಿಗೆ ಉತ್ತಮ ರಸ್ತೆ ಪಡೆಯುವ ಸಂಪೂರ್ಣ ಹಕ್ಕು ಇದೆ ಎಂಬುದನ್ನು ಜನತೆ ಸದಾ ನೆನನಪಿನಲ್ಲಿ ಇಟ್ಟುಕೊಂಡು, ಕಳಪೆ ರಸ್ತೆ ನೀಡಿ ಬೆಂಗಳೂರಿನ ಘನತೆ ಕುಗ್ಗಿಸುತ್ತಿರುವ ಸರ್ಕಾರವನ್ನು ಪ್ರಶ್ನಿಸಬೇಕು ಎಂದು ಜನರಿಗೆ ಮೋಹನ್ ದಾಸರಿ ಕರೆ ನೀಡಿದರು.
ಪ್ರತಿಭಟನೆಯಲ್ಲಿ ಎಎಪಿ ಮುಖಂಡರಾದ ಸುರೇಶ್ ರಾಥೋಡ್ ,ಜಗದೀಶ್ ವಿ ಸದಂ, ಸುಹಾಸಿನಿ, ಉಷಾ ಮೋಹನ್, ಅಂಜನಾ ಗೌಡ, ಭಾನುಪ್ರಕಾಶ್, ವಿಶ್ವನಾಥ್, ಮಹೇಶ್ ಬಾಬು ಮತ್ತಿತರರು ಭಾಗವಹಿಸಿದ್ದರು.