ಗದಗ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಹಾಲಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ಕವಿತಾ ಎಂ. ವಾರಂಗಲ್ ಅವರು ಗದಗ ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಮೀಸಲು ಕ್ಷೇತ್ರದಿಂದ 2023ರ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections) ಸ್ಪರ್ಧಿಸಲು ಕಾಂಗ್ರೆಸ್‌ನಿಂದ ಆಕಾಂಕ್ಷಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛೆಯಿರುವ ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಕೆಪಿಸಿಸಿ (KPCC) ಟಿಕೆಟ್ ಕೈತಪ್ಪಿದರೆ ಅಧಿಕೃತ ಅಭ್ಯರ್ಥಿಯ ವಿರುದ್ಧ ಸ್ಪರ್ಧೆ ನಡೆಸುವಂತಿಲ್ಲ ಎಂಬುವುದು ಸೇರಿ ಇತರ ಷರತ್ತುಗಳನ್ನು ವಿಧಿಸಿದ್ದು ಆ ಎಲ್ಲವನ್ನು ಒಪ್ಪಿ ಕವಿತಾ ಅವರು ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಕವಿತಾ ಎಂ. ವಾರಂಗಲ್ ಅವರು ಸರ್ಕಾರದ ಅಧೀನಕೊಳ್ಳಪಟ್ಟ ಡಾ.ಬಿ.ಆರ್. ಅಂಬೇಡ್ಕರ ನಿಗಮ ನಿಯಮಿತದ ಕಾಯಂ ನೌಕರರಾಗಿದ್ದು ಹಾಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಎಂಡಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಒಬ್ಬರು ಸರ್ಕಾರಿ ಅಧಿಕಾರಿಯಾಗಿದ್ದುಕೊಂಡೆ ರಾಜಕೀಯವಾಗಿ ಕಾಂಗ್ರೆಸ್ ಪಕ್ಷದಿಂದ ಶಿರಹಟ್ಟಿ ಮೀಸಲು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿ ಈಗಾಗಲೇ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಶಿರಹಟ್ಟಿ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಕಾಂಗ್ರೆಸ್ ಪಕ್ಷ ಸೂಚಿಸಿರುವಂತೆ ಅರ್ಜಿಯ ಜತೆಗೆ ಅರ್ಜಿಯ ಮೊತ್ತ ಐದು ಸಾವಿರ ರೂ. ಸೇರಿದಂತೆ ಕಟ್ಟಡ ನಿಧಿಯಾಗಿ ಒಂದು ಲಕ್ಷ ರೂಪಾಯಿಯನ್ನು ಡಿಡಿರೂಪದಲ್ಲಿ ಪಾವತಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕವಿತಾ ಅವರು ಸರ್ಕಾರಿ ಅಧಿಕಾರಿಯಾಗಿದ್ದುಕೊಂಡು ಈ ರೀತಿ ಒಂದು ರಾಜಕೀಯ ಪಕ್ಷದಿಂದ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿರುವುದು ಎಷ್ಟರ ಮಟ್ಟಿಗೆ ಸರಿಯಿದೆ ಎಂಬುವುದು ಈಗ ಎದ್ದಿರುವ ಪ್ರಶ್ನೆಯಾಗಿದೆ. ಇವರು ಕಾಂಗ್ರೆಸ್ ಪಕ್ಷದಿಂದ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿರುವುದೇ ಆದರೆ ಇವರು ಸರ್ಕಾರದ ಅಧೀನಕೊಳ್ಳಪಟ್ಟ ಡಾ.ಬಿ.ಆರ್. ಅಂಬೇಡ್ಕರ ನಿಗಮ ನಿಯಮಿತದ ಕಾಯಂ ನೌಕರರಾಗಿದ್ದು ರಾಜಕೀಯ ಮಾಡುತ್ತಿರುವುದು ಸಂಸ್ಥೆಯ Memorandum of Association of Companies Act 1956 ಮತ್ತು ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು, 2021ರ ಉಪನಿಯಮ 3(2)(i) (5) vil) ಮತ್ತು 50 ಉಲ್ಲಂಘನೆ ಮಾಡಿದಂತೆ ಆಗುವುದಿಲ್ಲವೇ ಎಂದು ಪ್ರಜ್ಞಾವಂತ ನಾಗರಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಹೀಗಾಗಿ ಇವರು ಕಾಂಗ್ರೆಸ್ ಪಕ್ಷದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಬಯಸಿ ಅರ್ಜಿಸಲ್ಲಿಸಿದ್ದರೆ ಕಾನೂನು ರೀತಿಯ ಕ್ರಮ ಜರುಗಿಸಲು ಸರ್ಕಾರ ಮುಂದಾಗಬೇಕಿದೆ. ಇಲ್ಲ ಸರ್ಕಾರ ಕ್ರಮ ಜರುಗಿಸುವ ಮುನ್ನ ಇವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಳಿಕ ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿ ಕೊಳ್ಳಬಹುದಾಗಿದೆ.
ಆದರೆ ಕವಿತಾ ಅವರು ಸರ್ಕಾರಕ್ಕೂ ಯಾವುದೇ ಮಾಹಿತಿ ನೀಡದೆ ಒಂದು ಅತ್ಯುನ್ನತ ಸ್ಥಾನದಲ್ಲಿದ್ದುಕೊಂಡು ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದರೆ ಕಾನೂನಾತ್ಮಕವಾಗಿ ಕ್ರಮ ಜರುಗಿಸಲೇ ಬೇಕು ಎಂಬುವುದು ಜನರ ಅಭಿಪ್ರಾಯವಾಗಿದೆ.
ಇನ್ನು ಈ ಬಗ್ಗೆ ಸ್ಪಷ್ಟನೆ ಪಡೆಯಲು ಕವಿತಾ ಅವರಿಗೆ ವಿಜಯಪಥ ವರದಿಗಾರರು ಪೋನ್‌ಕರೆ ಮಾಡಿದರು ಆದರೆ, ಕವಿತಾ ಅವರು ಕರೆಯನ್ನು ಸ್ವೀಕರಿಸಲಿಲ್ಲ.