ಹುಬ್ಬಳ್ಳಿ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸದಿರುವುದು ದುರದೃಷ್ಟಕರ. ಅದು ಹೋಗಲಿ 7ನೇ ವೇತನ ಆಯೋಗದಂತೆ ಸರಿ ಸಮಾನ ವೇತನ ಕೊಡಬೇಕು ಎಂದು ಸಾರಿಗೆ ಸಚಿವರೊಂದಿಗೆ ನಾವು ಕೂಡ ಸಿಎಂ ಭೇಟಿ ಮಾಡಿ ಚರ್ಚಿಸುತ್ತೇವೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಭರಮಗೌಡ ಕಾಗೆ ತಿಳಿಸಿದರು.
ಇತ್ತೀಚೆಗೆ ನಗರದಲ್ಲಿ ನಡೆದ ಕಾಠ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರಿಗೆ ಸಚಿವರು, ನಾವೇ ನಮ್ಮ ಸಿಬ್ಬಂದಿ ಹಿತ ಕಾಪಾಡುವ ಕೆಲಸ ಮಾಡ ಬೇಕು. ನೌಕರರಿಗೆ ಆರ್ಥಿಕ ಹೊರೆಯಾಗದಂತೆ ನ್ಯಾಯಯುತ ಸೌಲಭ್ಯಗಳನ್ನು ಕೊಡದಿದ್ದರೆ ಬದುಕಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾರಿಗೆ ಸಂಸ್ಥೆ ನೌಕರರು ಪರಿಶ್ರಮದಿಂದ ಕೆಲಸ ಮಾಡುತ್ತಾರೆ. ಅವರ ಶ್ರಮಕ್ಕೆ ತಕ್ಕ ವೇತನ ದೊರೆಯುತ್ತಿಲ್ಲ. ನಾನು ಹಾಗೂ ಸಾರಿಗೆ ಸಚಿವರು ಸೇರಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಇನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಜ.6ರಿಂದ ಜಾರಿಗೆ ಬಂದಿರುವ ನಗದು ರಹಿತ ವೈದ್ಯಕೀಯ ಸೌಲಭ್ಯಗಳನ್ನು ನಮ್ಮಲ್ಲೂ ಶೀಘ್ರದಲ್ಲೇ ಕಲ್ಪಿಸಲಾಗುವುದು ಈ ನಿಟ್ಟಿನಲ್ಲಿ ನಾವು ಕೂಡ ಯೋಜನೆ ಬಗ್ಗೆ ಚರ್ಚಿಸುತ್ತಿದ್ದೇವೆ ಎಂದರು.
ಇನ್ನು ನೌಕರರು ಎಸಗುವ ಸಣ್ಣಪುಟ್ಟ ತಪ್ಪಿಗೆ ದೊಡ್ಡ ಶಿಕ್ಷೆ ಆಗುತ್ತಿದ್ದು, ವಾಸ್ತವ ಅರಿತು ಕ್ರಮ ಕೈಗೊಳ್ಳುವಂತಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜತೆಗೆ ನೌಕರರು ಕೂಡ ಯಾವುದೆ ತಪ್ಪಾಗದ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಹೇಳಿದರು.