ನ್ಯೂಡೆಲ್ಲಿ: ಚೀನಾದಲ್ಲಿ ಹುಟ್ಟಿ ಇದೀಗ ಇಡೀ ವಿಶ್ವಕ್ಕೇ ಕಂಟಕವಾಗಿ ಪರಿಣಮಿಸಿರುವ ಕೊರೊನಾ ಭಾರತದಲ್ಲಿಯೂ ರಣಕೇಕೆ ಹಾಕುತ್ತಿದೆ.
ಈ ವಿಶ್ವಮಹಾಮಾರಿಗೆ ಇಲ್ಲಿಯವರೆಗೂ 1,218 ಮಂದಿ ಬಲಿಯಾಗಿದ್ದು, 37,336 ಮಂದಿ ಸೋಂಕಿಗೊಳಗಾಗಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ಮಾಹಿತಿ ನೀಡಿದೆ.
37,336 ಮಂದಿ ಸೋಂಕಿತರ ಪೈಕಿ ಈ ವರೆಗೂ 9,950 ಮಂದಿ ಗುಣಮುಖರಾಗಿದ್ದು, ಪ್ರಸ್ತುತ ದೇಶದಲ್ಲಿ ಇನ್ನೂ 26,167 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೊರೊನಾ ಮಟ್ಟಹಾಕಲು ಈ ಹಿಂದೆ ಕೇಂದ್ರ ಸರ್ಕಾರ 21 ದಿನಗಳ ಕಾಲ ದೇಶದಾದ್ಯಂತ ಲಾಕ್’ಡೌನ್’ಗೆ ಆದೇಶ ನೀಡಿತ್ತು. ಲಾಕ್’ಡೌನ್ ನಡುವಲ್ಲೂ ಈ ಹೆಮ್ಮಾರಿ ತನ್ನ ಆರ್ಭಟ ಮುಂದುವರಿಸಿದೆ. ಇದರಿಂದ ಮತ್ತೆ ಕೇಂದ್ರ ಸರ್ಕಾರ 14 ದಿನಗಳಿಗೆ ಲಾಕ್’ಡೌನ್ ವಿಸ್ತರಣೆ ಮಾಡಿದೆ. ಆದರೆ, ಕೊರೊನಾ ವಿರುದ್ದದ ಹೋರಾಟದ ಜೊತೆಗೇ ಆರ್ಥಿಕ ಚಟುವಟಿಕೆಗಳನ್ನೂ ಹಂತಹಂತವಾಗಿ ಆರಂಭಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಹೆಚ್ಚಿನ ವಿನಾಯಿತಿಗಳನ್ನು ಪ್ರಕಟಿಸಿದೆ.
ಇದು ದೇಶದ ಜನತೆಗೆ ಮಾರಕವಾಗುವುದೋ ಅಥವಾ ವರವಾಗುವುದೋ ಎಂದು ಸದ್ಯ ಇರುವ ಕುತೂಹಲವಾಗಿದೆ. ಈ ನಡುವೆ ಆತಂಕವು ನಾಗರಿಕರ ಮನದಲ್ಲಿ ಮನೆಮಾಡಿದೆ. ಅದು ಏನೇಆಗಲಿ ಈ ಮಹಾಮಾರಿಗೆ ಕಡಿವಾಣಹಾಕುವ ಮೂಲಕ ದೇಶದ ಜನರು ನಿಟ್ಟುಸಿರು ಬಿಡುವಂತಾಗಬೇಕು.