-
ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಜತೆಗೆ ಸಂಸ್ಥೆ ಒಡಂಬಡಿಕೆ
-
ಅಂಗವಿಕಲರಾದರೆ 50 ಲಕ್ಷ ರೂ. ವಿಮಾ ಪರಿಹಾರ
ಬೆಂಗಳೂರು: ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಸಿಬ್ಬಂದಿಗೆ ಒಂದು ಕೋಟಿ ರೂಪಾಯಿ ಮೊತ್ತದ ಅಪಘಾತ ವಿಮಾ ಯೋಜನಾ ಸೌಲಭ್ಯ ಜಾರಿಗೆ ತಂದಿದೆ.
ಈಗಾಗಲೇ, 50 ಲಕ್ಷ ರೂ. ವಿಮೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಸೋಮವಾರ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಅವರಿಂದ ಮಾಡಿಕೊಂಡ ಒಡಂಬಡಿಕೆಯ 50 ಲಕ್ಷ ರೂಪಾಯಿ ಸೇರಿ ಒಟ್ಟು 1 ಕೋಟಿ ರೂಪಾಯಿ ಅಪಘಾತ ವಿಮೆ ನೀಡುವ ಯೋಜನೆಯನ್ನು ಕೆಎಸ್‌ಆರ್‌ಟಿಸಿ ರೂಪಿಸಿದೆ.
ಸೋಮವಾರ ನಿಗಮದ ಕೇಂದ್ರ ಕಚೇರಿಯಲ್ಲಿ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಅಧಿಕಾರಿಗಳು ಮತ್ತು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಈ ಒಡಂಬಡಿಕೆಗೆ ಸಹಿ ಹಾಕಿದ್ದಾರೆ. ಈ ವಿಮಾ ಯೋಜನೆಗೆ ಸಿಬ್ಬಂದಿ ಪ್ರತಿ ತಿಂಗಳು 62.50, ಜಿ.ಎಸ್.ಟಿ ಸೇರಿದಂತೆ ವಾರ್ಷಿಕ 885 ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ.
ಈ ವೈಯಕ್ತಿಕ ವಿಮಾ ಯೋಜನೆಯಿಂದ ಪಾಲಿಸಿದಾರರು ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ 50 ಲಕ್ಷ ರೂ.ಗಳ ಪರಿಹಾರದ ಹಣ ಕೂಡಲೇ ದೊರೆಯಲಿದೆ. ಇನ್ನು ಅಪಘಾತದಲ್ಲಿ ಸಿಬ್ಬಂದಿ ಶಾಶ್ವತವಾಗಿ ಪೂರ್ಣ ಅಂಗವಿಕಲರಾದರೆ 50 ಲಕ್ಷ ರೂ.ಗಳ ವಿಮಾ ಪರಿಹಾರ ದೊರೆಯಲಿದೆ.
ಈ ವಿಮಾ ಯೋಜನೆಯಲ್ಲಿ ಮತ್ತೊಂದು ಉಪಯುಕ್ತ ಕ್ರಮವೆಂದರೆ ಕರ್ತವ್ಯ ನಿರತ ಹಾಗೂ ಕರ್ತವ್ಯದಲ್ಲಿ ಇಲ್ಲದ ಸಮಯದಲ್ಲೂ ಆಗುವ ವೈಯಕ್ತಿಕ ಅಪಘಾತಗಳಿಗೂ ವಿಮೆ ಅನ್ವಯಿಸುತ್ತದೆ. ಒಂದು ವೇಳೆ ಸಿಬ್ಬಂದಿಯು ಅಪಘಾತಕ್ಕೆ ಒಳಗಾಗಿ ತಾತ್ಕಾಲಿಕ ಅಂಗವಿಕಲತೆ ಉಂಟಾಗಿ, ತನ್ನ ಮೂಲ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಅಸಮರ್ಥನಾದಲ್ಲಿ, ಆತ ಚೇತರಿಸಿಕೊಳ್ಳುವವರೆಗೆ, ವಿಮೆ ಮಾಡಲಾದ 50 ಲಕ್ಷ ರೂ. ಮೊತ್ತದ ಶೇಕಡಾ ಒಂದರಷ್ಟು ಮೊತ್ತವನ್ನು ಪ್ರತಿವಾರ 5000 ರೂ.ಗೆ ಹೆಚ್ಚದಂತೆ ಅಥವಾ ಅವರ ಮಾಸಿಕ ಸಂಬಳದ ಶೇಕಡಾ 25ರಷ್ಟನ್ನು ಯಾವುದು ಕಡಿಮೆಯೋ ಅದನ್ನು ಸಿಬ್ಬಂದಿಗೆ ವಿಮಾ ಸಂಸ್ಥೆಯು ನೀಡಲಿದೆ.
ಈ ಎರಡು ವಿಮಾ ಯೋಜನೆಗಳಿಂದ ನಿಗಮವು ತನ್ನ ಸಿಬ್ಬಂದಿಗಳಿಗೆ 1 ಕೋಟಿ ಮೊತ್ತದ ಅಪಘಾತ ಪರಿಹಾರ ವಿಮಾ ಯೋಜನೆ ಜಾರಿಗೆ ತಂದಿದೆ. ಇಲ್ಲಿಯವರೆಗೂ ನಿಗಮದ ಸಿಬ್ಬಂದಿಗೆ ಯಾವುದೇ ಅಪಘಾತ ವಿಮಾ ಯೋಜನೆಯ ಸೌಲಭ್ಯವಿರಲಿಲ್ಲ.
ಈ ಸಂದರ್ಭದಲ್ಲಿ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ ಮಾತನಾಡಿ, “ನಿಗಮವು ಜಾರಿಗೊಳಿಸುತ್ತಿರುವ ಈ ವಿಮಾ ಯೋಜನೆಯು ಕಾರ್ಮಿಕ ಮತ್ತು ಅವರ ಕುಟುಂಬದವರ ಹಿತದೃಷ್ಟಿಯಿಂದ ಜಾರಿಗೊಳಿಸುತ್ತಿರುವ ಅತ್ಯುತ್ತಮವಾದ ಯೋಜನೆಯಾಗಿದೆ. ಕರ್ತವ್ಯ ನಿರತ ಮತ್ತು ಕರ್ತವ್ಯ ಹೊರತಾಗಿ ಒಳಗೊಂಡಂತೆ ನೀಡಲಾಗುವ ಈ ಅಪಘಾತ ವಿಮಾ ಯೋಜನೆಯಿಂದ ಸಿಬ್ಬಂದಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.
ಸಂಸ್ಥೆ ನಿರ್ದೇಶಕ ಡಾ. ನವೀನ್ ಭಟ್, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಪ್ರಾದೇಶಿಕ ವ್ಯವಸ್ಥಾಪಕಿ ಉಷಾ ಚಂದ್ರಮೌಳಿ, ಜಂಟಿ ಕ್ರಿಯಾ ಸಮಿತಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ಸೇರಿದಂತೆ ಇತರ ಕಾರ್ಮಿಕ ಸಂಘಗಳ ಮುಖಂಡರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಕೆ. ಎಸ್ ಆರ್ ಟಿ ಸಿ ಸಿಬ್ಬಂದಿಗಳಿಗೆ ರೂ.1 ಕೋಟಿ ಮೊತ್ತದ ಅಪಘಾತ ವಿಮಾ ಯೋಜನೆ ಸೌಲಭ್ಯ ಜಾರಿ. pic.twitter.com/MpH4Zdf0ON
— KSRTC (@KSRTC_Journeys) November 14, 2022