ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಶನಿವಾರ ಬೆಳಗ್ಗೆ ಸಡಗರ ಸಂಭ್ರಮದಿಂದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ ಸಿ.ಎನ್. ಮಂಜುನಾಥ್ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಎಸ್.ಟಿ. ಸೋಮಶೇಖರ್, ಬಿ.ಸಿ. ಪಾಟೀಲ್ ಅವರೊಂದಿಗೆ ಬೆಳ್ಳಿ ತೇರಿನಲ್ಲಿ ಇದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಬೆಳಗ್ಗೆ 7.45 ಹಬ್ಬಕ್ಕೆ ಚಾಲನೆ ನೀಡಲಾಯಿತು.
ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಸಂಸದ ಪ್ರತಾಪ್ ಸಿಂಹ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿದ ಕೊರೊನಾ ವಾರಿಯರ್ಸ್ಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಸಿ.ಎನ್. ಮಂಜುನಾಥ್ ಉದ್ಘಾಟನಾ ಭಾಷಣ ಮಾಡಿ, ತಾಯಿ ಚಾಮುಂಡೇಶ್ವರಿ ಕೊರೊನಾ ವಿಶ್ವಮಾರಿಯನ್ನು ಬೇಗ ನಿರ್ನಾಮಮಾಡಿ ವಿಶ್ವದ ಜನತೆ ಸೋಂಕಿನಿಂದ ಬಹುಬೇಗ ಮುಕ್ತರಾಗುವಂತೆ ಮಾಡಬೇಕು ಎಂದು ಪ್ರಾರ್ಥಿಸಿದರು.
ಇನ್ನು ಕೊರೊನಾ ತನ್ನ ಅಟ್ಟಹಾಸವನ್ನು ರಾಜ್ಯದಲ್ಲೂ ಮುಂದುವರಿಸಿದ್ದು, ಜನರು ಕೊರೊನಾ ನಿಯಮ ಪಾಲನೆ ಮಾಡುವ ಮೂಲಕ ಸೋಂಕಿನಿಂದ ದೂರ ಉಳಿಯಬೇಕು. ಕೋವಿಡ್ನಿಂದಾಗಿ ಇಂದು ಸರಳ ದಸರಾ ಆಚರಣೆಗೆ ಸರ್ಕಾರ ಆದ್ಯತೆ ನೀಡಿದ್ದು, ಜನತೆಯ ಆರೋಗ್ಯ ದೃಷ್ಟಿಯಿಂದ ಜಿಲ್ಲಾಡಳಿತದ ಆದೇಶವನ್ನು ಪ್ರತಿಯೊಬ್ಬರೂ ಪಾಲನೆ ಮಾಡುವ ಮೂಲಕ ಸಹಕರಿಸಬೇಕು ಎಂದರು.