ತಿ.ನರಸೀಪುರ: ಬಡವರಿಗೆ ಸಮರ್ಪಕವಾಗಿ ಪಡಿತರ ಪದಾರ್ಥ ವಿತರಿಸದೆ ಅಕ್ರಮವಾಗಿ ಮಾರಾಟ ಮಾಡಿದ ಆರೋಪದ ಮೇರೆಗೆ ತಾಲೂಕಿನ ಸೋಸಲೆ ಹೋಬಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ಆಹಾರ ಇಲಾಖೆಯ ಜಂಟಿ ನಿರ್ದೇಶಕರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಭ್ರಷ್ಟಾಚಾರ ಹೋರಾಟ ಸಮಿತಿಯ ಅಧ್ಯಕ್ಷ ಸೋಸಲೆ ಶಶಿಕಾಂತ ನೀಡಿದ ದೂರಿನ ಹಿನ್ನೆಲೆಯಲ್ಲಿ ಅಂಗಡಿಯನ್ನು ಅಮಾನತು ಮಾಡಲಾಗಿದೆ.
ಸೋಸಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿ ಕಾರ್ಯದರ್ಶಿ ಜಗದೀಶ್ ಬಡವರಿಗೆ ವಿತರಿಸಬೇಕಾದ ಪಡಿತರವನ್ನು ಸಮರ್ಪಕವಾಗಿ ವಿತರಿಸದೆ, ಅಕ್ರಮವಾಗಿ ಮಾರಾಟ ಮಾಡುವ ಮೂಲಕ ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ. ನಿಗದಿಪಡಿಸಿರುವುದಕ್ಕಿಂತ ಕಡಿಮೆ ಪ್ರಮಾಣದಲ್ಲಿ ವಿತರಿಸುತ್ತಿದ್ದಾರೆ. ಗ್ರಾಮದ ಪಡಿತರ ಕುಟುಂಬಗಳಿಗೆ ಗೋಧಿಯನ್ನು ವಿತರಣೆ ಮಾಡಿಲ್ಲ. ಕೆಲವು ಕುಟುಂಬಕ್ಕೆ 2 ತಿಂಗಳ ಪಡಿತರಕ್ಕೆ ಬದಲು ಒಂದು ತಿಂಗಳ ಪಡಿತರ ನೀಡಿದ್ದಾರೆ.
ಗೋದಾಮಿನಿಂದ ಪಡಿತರ ಖರೀದಿಸಿದ 10-15 ದಿನಗಳ ನಂತರ ಗ್ರಾಹಕರಿಗೆ ವಿತರಣೆ ಮಾಡುವ ಮೂಲಕ ನ್ಯಾಯಬೆಲೆ ಅಂಗಡಿಯ ನಿಯಮವನ್ನುಉಲ್ಲಂಘಿಸಿದ್ದು ಕಾನೂನು ಕ್ರಮ ಜರಗಿಸುವಂತೆ ಶಶಿಕಾಂತ್ ಆಹಾರ ಇಲಾಖೆಯ ಜಂಟಿ ನಿರ್ದೇಶಕರಿಗೆ ದೂರು ನೀಡಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತಹಸೀಲ್ದಾರ್ ಅವರಿಗೆ ಆಹಾರ ಇಲಾಖೆ ಸೂಚಿಸಿತ್ತು. ತನಿಖೆ ನಡೆಸಿದ ತಹಸೀಲ್ದಾರ್ ಅವರು ಜಂಟಿ ನಿರ್ದೇಶಕರಿಗೆ ವರದಿ ಸಲ್ಲಿಸಿದ್ದರು. ವರದಿಯಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಲೋಪದೋಷ ಕಂಡುಬಂದ ಹಿನ್ನೆಲೆಯಲ್ಲಿ ಆಹಾರ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಪಿ. ಶಿವಣ್ಣ ನ್ಯಾಯಬೆಲೆ ಅಂಗಡಿ ಪ್ರಾಧಿಕಾರವನ್ನು ವಿಚಾರಣೆಗೆ ಕಾಯ್ದಿರಿಸಿ ಪರವಾನಗಿಯನ್ನು ಅಮಾನತುಪಡಿಸಿ ಆದೇಶ ಹೊರಡಿಸಿದ್ದಾರೆ.