ಬೆಂಗಳೂರು: ‘ಲಗ್ನಪತ್ರಿಕೆ’ ಧಾರಾವಾಹಿಯ ಶೂಟಿಂಗ್ನಲ್ಲಿ ಶನಿವಾರ ಬೆಳಗ್ಗೆ ಪಾಲ್ಗೊಂಡಿದ್ದ ನಟ ಕೃಷ್ಣ ನಾಡಿಗ್ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಕೃಷ್ಣ ನಾಡಿಗ್ ಅವರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಆದರೆ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ.
ಕೃಷ್ಣ ನಾಡಿಗ್ ಅವರು ಧಾರಾವಾಹಿಗಳಷ್ಟೇ ಅಲ್ಲದೆ ಸಿನಿಮಾಗಳಲ್ಲಿಯೂ ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಮಿಲನ, ದೇವಿ, ಪಾರು ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರು. ಪೈಲ್ವಾನ್, ಆದಿ ಲಕ್ಷ್ಮಿ ಪುರಾಣ ಸೇರಿ ಹಲವು ಸಿನಿಮಾಗಳಲ್ಲೂ ನಟಿಸಿದ್ದರು.
ಚಿಕ್ಕಮಗಳೂರು ಮೂಲದವರಾದ ನಾಡಿಗ್, ನಾಟಕಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರಿಂದ ಪುಟ್ಟಣ್ಣ ಕಣಗಾಲ್ ಸಿನಿಮಾಗಳನ್ನು ನೋಡಿ ನಿರ್ದೇಶಕನಾಗುವ ಕನಸು ಹೊತ್ತು ಬಂದಿದ್ದರು. ಆದರೆ, ಕೊನೆಗೆ ನಟರಾಗಿ ಜನರ ಮನಗೆದ್ದಿದ್ದರು.
ಇಂದು ಬೆಳಗ್ಗೆ 11 ಗಂಟೆವರೆಗೆ ಅವರ ಗಿರಿನಗರ ನಿವಾಸದಲ್ಲಿ ಪಾರ್ಥಿವ ಶರೀರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ತದನಂತರದಲ್ಲಿ ಚಾಮರಾಜಪೇಟೆಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ನಾಡಿಗ್ ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.
‘ಸಂಜೆಯವರೆಗೂ ನಮ್ಮ ಜತೆ ಚಿತ್ರೀಕರಣದಲ್ಲಿ ಲವಲವಿಕೆಯಿಂದ ಭಾಗವಹಿಸಿ ..ಈಗ ಹೀಗೆ ಬಿಟ್ಟು ಹೋದ್ರಾ? ಇದು ಭರಿಸಲಾಗದ ನೋವು… ನಾಡಿಗರೆ’ ಎಂದು ಲಗ್ನಪತ್ರಿಕೆ ಧಾರಾವಾಹಿ ನಿರ್ದೇಶಕ ಅರವಿಂದ್ ಕೌಶಿಕ್ ಹೇಳಿದ್ದಾರೆ.
‘ನಿಮ್ಮ ವಿದಾಯ ಸೃಷ್ಟಸಿದ ಶೂನ್ಯ ಅಗಾಧವಾದದ್ದು….ನಿಮ್ಮ ಮಮತೆ ತುಂಬಿದ ಹೃದಯ, ಜ್ಞಾನ ತುಂಬಿದ ಮಾತುಗಳು, ಮರೆಯಲಾಗದ ನಟನೆ…..ಅಂತಹ ಹೃದಯವೇ ನಿಮ್ಮನ್ನು ಬಿಟ್ಟಿತೇ..’ ಎಂದು ನಿರ್ದೇಶಕ ಟಿ.ಎನ್. ಸೀತಾರಾಮ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ.