ಚಾಮರಾಜನಗರ: ನಮ್ಮ ಬೀದಿಯಲ್ಲಿ ಗ್ರಾಮದೇವತೆ ಉತ್ಸವ ಮೂರ್ತಿ ಮೆರವಣಿಗೆ ಹಾದುಹೋಗಲಿ ಎಂದು ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದ ದಲಿತ ಸಮುದಾಯದ ಇಬ್ಬರು ಕೂಲಿಕಾರ್ಮಿಕರಿಗೆ ಗ್ರಾಮಸ್ಥರು ಬರೋಬರಿ 60,202 ದಂಡ ವಿಧಿಸಿರುವ ಅಮಾನವೀಯ ಘಟನೆ ಎಳಂದೂರು ತಾಲೂಕಿನ ಹೊನ್ನೂರಿನಲ್ಲಿ ನಡೆದಿದೆ.
ಅಕ್ಟೋಬರ್ 15ರ (ಗುರುವಾರ) ರಾತ್ರಿ ಗ್ರಾಮದ ನಿಂಗರಾಜು ಎಂಬುವರಿಗೆ 50,103 ಹಾಗೂ ಶಂಕರ್ಮೂರ್ತಿ ಎಂಬುವರಿಗೆ 10,001 ರೂ. ದಂಡ ವಿಧಿಸಿದ್ದಾರೆ. ದಂಡದ ಹಣವನ್ನುಇಂದೇ ಪಾವತಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ನಿಂಗರಾಜು ತಮ್ಮ ಪತ್ನಿಯ ಒಡವೆಗಳನ್ನು ಅಡವಿಟ್ಟು ತಂದು ದಂಡ ಪಾವತಿಸಿದ್ದಾರೆ. ಈ ಘಟನೆ ಕುರಿತು ತಹಸೀಲ್ದಾರ್ ಹಾಗೂ ಎಳಂದೂರು ಪೊಲೀಸ್ ಠಾಣೆಗೆ ಶನಿವಾರ ದೂರು ದಾಖಲಾಗಿದೆ.
ಘಟನೆ ವಿವರ: ಹೊನ್ನೂರು ಗ್ರಾಮದಲ್ಲಿರುವ ಮುಜರಾಯಿ ಇಲಾಖೆ ಅಧೀನದ ಚಾಮುಂಡೇಶ್ವರಿ ದೇವಿಯ ಮೆರವಣಿಗೆ ಪ್ರತಿವರ್ಷ ವಿಜಯದಶಮಿಯಂದು ಕೇವಲ ಸವರ್ಣೀಯರ ಬೀದಿಯಲ್ಲಿ ಮಾತ್ರ ದೇವಿಯ ಮೆರವಣಿಗೆ ಹಾದುಹೋಗುತ್ತದೆ. ಹೀಗಾಗಿ ನಮ್ಮ ದಲಿತರ ಬೀದಿಯಲ್ಲೂ ಹಾದು ಹೋಗಬೇಕೆಂದು ವಕೀಲ ರಾಜಣ್ಣ ಅವರ ನೇತೃತ್ವದಲ್ಲಿ ನಿಂಗರಾಜು ಹಾಗೂ ಇತರರು ಈಚೆಗೆ ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ದೇವತೆ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಮನವಿ ಮಾಡಿದ್ದರು.
ದಲಿತರ ಬೀದಿಯಲ್ಲೂ ದೇವರ ಮೆರವಣಿಗೆ ನಡೆಸಬೇಕು ಎಂದು ತಹಸೀಲ್ದಾರ್ ಅವರಲ್ಲಿ ಮನವಿ ಮಾಡಿದ್ದನ್ನು ಗ್ರಾಮಲೆಕ್ಕಿಗ ದೇವೇಂದ್ರ ನಾಯಕ ಗ್ರಾಮದ ಮುಖಂಡರಿಗೆ ನನ್ನ ಫೋಟೋ ಸಹಿತ ತಿಳಿಸಿದ ಪರಿಣಾಮ ಗ್ರಾಮಸ್ಥರು ಅರ್ಧಗಂಟೆಯೊಳಗೆ ಭಾರಿ ಮೊತ್ತದ ದಂಡ ವಿಧಿಸಿದ್ದರು. ಇದರಿಂದ ನಮ್ಮ ಎರಡು ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ನಿಂಗರಾಜು ಆರೋಪಿಸಿದ್ದಾರೆ.
ದೇವಿ ಮೆರವಣಿಗೆ ಎಂದಾದರೂ ನಿಮ್ಮ ಕೇರಿ ಬರೋದು ಉಂಟಾ? ಹೊಲಗೇರಿಗೆ ದೇವಿ ಬಂದರೆ ನೀವೆಲ್ಲರೂ ಜೀವಂತವಾಗಿ ಉಳಿಯುತ್ತೀರಾ? ಎಂದ ಊರ ಗೌಡರು, ನಿಮಗೆ ಸರಿಯಾದ ಪಾಠ ಕಲಿಸುತ್ತೇವೆ ಎಂದು ಹೇಳಿ ಈ ದಂಡ ಹಾಕಿದ್ದಾರೆ ಎಂದು ನಿಂಗರಾಜು ದೂರು ನೀಡಿದ್ದಾರೆ.
ವಕೀಲ ರಾಜಣ್ಣ ಅವರು ತಹಸೀಲ್ದಾರ್ ಅವರಿಗೆ ದೂರು ನೀಡಿದ್ದಾರೆ. ಆದರೆ ಗ್ರಾಮದ ಶಂಕರಮೂರ್ತಿ ಹಾಗೂ ನನಗೆ ಮಾತ್ರ ಗ್ರಾಮಸ್ಥರು ದಂಡ ವಿಧಿಸಿದ್ದು ಯಾವ ನ್ಯಾಯ? ದಲಿತ ಸಮುದಾಯಕ್ಕೆ ಸೇರಿದ ಜಿಲ್ಲಾಧಿಕಾರಿ, ಸಂಸದರು, ಶಾಸಕರು ಪ್ರತಿನಿಧಿಸುವ ಊರಿನಲ್ಲಿ ಘಟನೆ ನಡೆದಿದೆ. ಅವರೇ ನನಗೆ ನ್ಯಾಯ ಕೊಡಿಸಬೇಕೆಂದು ನಿಂಗರಾಜು ಮನವಿ ಮಾಡಿದ್ದಾರೆ.
ಗ್ರಾಮದಲ್ಲಿ ನನಗೆ ಒಂದು ಗುಂಟೆ ಜಮೀನು ಕೂಡ ಇಲ್ಲ. ಗಂಡ-ಹೆಂಡತಿ ಇಬ್ಬರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಇನ್ನು ಭಾರೀ ಮೊತ್ತದ ದಂಡ ವಿಧಿಸಿದ ಕಾರಣ ನನ್ನ ಹೆಂಡತಿಯ ಚಿನ್ನಾಭರಣಗಳನ್ನು ಅಡವಿಟ್ಟು ದಂಡ ಬೇಕಾಯಿತು.
l ನಿಂಗರಾಜು, ಹೊನ್ನೂರು ಗ್ರಾಮಸ್ಥದಂಡ ವಿಧಿಸಿರುವ ಘಟನೆ ನಮ್ಮ ಗಮನಕ್ಕೆ ಬಂದಿದೆ. ಸಮಸ್ಯೆ ಇತ್ಯರ್ಥಪಡಿಸುವಂತೆ ತಹಸೀಲ್ದಾರರಿಗೆ ಸೂಚನೆ ನೀಡಿದ್ದೇನೆ.
l ಎನ್. ಮಹೇಶ್ ಶಾಸಕ