ಹುಬಳ್ಳಿ: ಚುನಾವಣೆ ಹತ್ತಿರ ಬಂದಾಗ ಎಚ್.ಡಿ.ಕುಮಾರಸ್ವಾಮಿ ಅವರು ಕಣ್ಣೀರು ಸುರಿಸುವುದು, ಕಿರುಕುಳ ಕೊಟ್ಟಿದ್ದರು ಅನ್ನೋದು ಎಲ್ಲವೂ ರಾಜ್ಯದ ಜನರಿಗೆ ಸಾಮಾನ್ಯವಾಗಿದೆ. ಅವರು ಸರಿಯಾಗಿ ಆಡಳಿತ ನಡೆಸಿದ್ದರೆ ಯಾರೂ ಪಕ್ಷ ಬಿಟ್ಟು ಹೋಗ್ತಾ ಇರಲಿಲ್ಲ. ಕುಣಿಯೋಕೆ ಬಾರದವಳು ನೆಲ ಡೊಂಕು ಅಂದಳಂತೆ ಹಾಗಾಯ್ತು ಇವರ ಕತೆ ಎಂದು ವ್ಯಂಗ್ಯವಾಡಿದ್ದಾರೆ.
ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಇಂದು ಆಯೋಜಿಸಿದ್ದ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಇನ್ನು ಎಚ್.ಡಿ. ದೇವೇಗೌಡರಿಗೆ ನನ್ನಿಂದ ತೊಂದರೆಯಾಗಿದ್ದರೆ ಅವರು ಮಾತನಾಡುತ್ತಾರೆ. ಅವರ ಪರವಾಗಿ ಮಾತನಾಡುವ ಅಧಿಕಪ್ರಸಂಗತನ ಈ ನಳಿನ್ ಕುಮಾರ್ ಕಟೀಲ್ ಗೆ ಯಾಕೆ? ಅವರ ಪಕ್ಷದ ಶಾಸಕನೇ ಯಡಿಯೂರಪ್ಪ ಬದಲಾಗುತ್ತಾರೆ ಎಂದು ಹೇಳ್ಕೊಂಡಿದ್ದಾರೆ. ಅಂತಹವರ ವಿರುದ್ಧ ಕ್ರಮಕೈಗೊಳ್ಳುವ ಧೈರ್ಯ ಈ ಕಟೀಲ್‌ಗಿಲ್ಲ ಎಂದು ಹೇಳಿದರು.
ರಾಜ್ಯದ ಬಿಜೆಪಿ ಸರ್ಕಾರ ಆಂತರಿಕ ಬಿಕ್ಕಟ್ಟಿನಿಂದ ಪತನಗೊಂಡರೆ ನಾವು ಚುನಾವಣೆ ಎದುರಿಸಲು ಸಿದ್ಧರಿದ್ದೇವೆ. ನಾವಾಗಿ ಈ ಸರ್ಕಾರವನ್ನು ಉರುಳಿಸಲು ಹೋಗುವುದಿಲ್ಲ. ಅಡ್ಡಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಈ ಬಿಜೆಪಿ ಸರ್ಕಾರ ಬಹಳ ದಿನ ಉಳಿಯಲು ಸಾಧ್ಯ ಇಲ್ಲ ಎಂದರು.