ಬೆಂಗಳೂರು: ದಸರಾ ಹಬ್ಬವನ್ನು ನಾಡ ಹಬ್ಬ, ನಮ್ಮ ನೆಲದ ಹಬ್ಬ ಎಂದು ಕರೆಯಲಾಗುತ್ತದೆ. ಈ ಹಬ್ಬವನ್ನು ರಾಜ್ಯದ ಶಕ್ತಿ ಕೇಂದ್ರವಾಗಿರುವ ವಿಧಾನಸೌಧದಲ್ಲಿಯೂ ಪ್ರತೀವರ್ಷ ಆಚರಿಸಿಕೊಂಡು ಬರಲಾಗಿದೆ. ಆದರೆ, ಈ ಬಾರಿ ಈ ಹಬ್ಬದ ಆಚರಣೆ ಮೇಲೆ ಕೊರೊನಾದ ಕರಿನೆರಳು ಬಿದ್ದಿದೆ.
ಕೊರೊನಾ ಭೀತಿಯೊಂದಿಗೆ ಈ ಬಾರಿ ಹಬ್ಬ ಅಕ್ಟೋಬರ್ 25 ರಂದು ಭಾನುವಾರ ಬಂದಿದೆ. ಈಗಾಗಲೇ ಹಬ್ಬದ ಆಚರಣೆಗೆ ಕುರಿತು ಸರ್ಕಾರ ಸಾಕಷ್ಟು ನಿರ್ಬಂಧಗಳನ್ನೂ ವಿಧಿಸಿದ್ದು, ಆಚರಣೆಯಲ್ಲಿ ಸಂಭ್ರಮ ಕೊಂಚ ಕಡಿಮೆಯಾಗಲಿದೆ.
ಈ ಹಬ್ಬ ಆಚರಣೆಗೆ ಸರ್ಕಾರಿ ಅಧಿಕಾರಿಗಳು ಹಾಗೂ ಸಚಿವರು ಭಾಗಿಯಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರೂ ಕೂಡ ಹಬ್ಬದ ಆಚರಣೆಯಿಂದ ದೂರ ಉಳಿದಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಆಯಾ ಇಲಾಖೆಯ ಸಿಬ್ಬಂದಿ ಪೂಜೆಗಾಗಿ ಅರ್ಚಕರನ್ನು ಕರೆದಿದ್ದು, ಅರ್ಚಕರೇ ವಿಧಾಸೌಧದಲ್ಲಿರುವ ಎಲ್ಲಾ ವಸ್ತು, ಆಯುಧಗಳಿಗೂ ಪೂಜೆ ಸಲ್ಲಿಸಲಿಸುವರು ಎಂದು ಹೇಳಲಾಗುತ್ತಿದೆ.
ಸಾಮಾನ್ಯವಾಗಿ ದಸರಾ ಹಬ್ಬ ಬರುತ್ತಿದ್ದಂತೆ ಸಚಿವರು ತಮ್ಮ ಇಲಾಖೆಯ ಸಿಬ್ಬಂದಿಗೆ ಉಡುಗೊರೆ, ಸ್ವೀಕ್ ಬಾಕ್ಸ್ ಹಾಗೂ ಬಟ್ಟೆಗಳನ್ನು ನೀಡುತ್ತಿದ್ದರು. ಆದರೆ, ಈ ಬಾರಿ ಆ ಸಡಗರವೆಲ್ಲವೂ ಮರೆಯಾಗಲಿದೆ. ಅರ್ಚಕರನ್ನು ಸಚಿವರು ಕರೆಸುತ್ತಿಲ್ಲ. ಸಿಬ್ಬಂದಿಯೇ ಎಲ್ಲವನ್ನು ನಿಭಾಯಿಸುವಂತೆ ತಿಳಿಸಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ನಡುವೆ ವಿಧಾನಸೌಧದ ಆವರಣದಲ್ಲಿರುವ ಪೊಲೀಸ್ ಠಾಣೆಯನ್ನು ಅಲಂಕೃತಗೊಳಿಸಲಾಗುತ್ತಿದ್ದು, ಆಯುಧಗಳನ್ನು ಜಾಗೃತರಾಗಿ ಸ್ವಚ್ಛಗೊಳಿಸುವ ಕಾರ್ಯಗಳನ್ನು ನಡೆಸುತ್ತಿದ್ದಾರೆ.