ಕಲಬುರಗಿ: ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಸಿದ್ದರಾಮಯ್ಯಗಿಂತ ಹೆಚ್ಚು ಧಮ್ ಇದೆ ಅಂತಾರೆ. ಧಮ್ ಇದ್ದರೆ ಪ್ರಧಾನಿ ಮೋದಿ ಮುಂದೆ ಕೂತು ಪರಿಹಾರ ತೆಗೆದುಕೊಂಡು ಬರಲಿ ಎಂದು ಅಶ್ವಥ್ ನಾರಾಯಣ್ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲೆಸೆದಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲ. ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಪದೇಪದೆ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರ್ತಾರಂತೆ ಸವದಿ ಹೇಳುತ್ತಿದ್ದಾರೆ. ಪ್ರವಾಹ ಸಂತ್ರಸ್ತರ ಬಗ್ಗೆ ಮಾತನಾಡುವುದನ್ನು ಬಿಟ್ಟಿದ್ದಾರೆ. ಇನ್ನು ಶಾಸಕರು ಬರ್ತಾರಂತೆ ಎಂದು ವಾಗ್ದಾಳಿ ನಡೆಸಿದರು.
ಉಪ ಚುನಾವಣೆಯ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಅನ್ನೋದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಈ ನಡುವೆ ಜನರು ಅಭಿಮಾನದಿಂದ ಸಿಎಂ ಆಗಲಿ ಅಂತ ಹೇಳುತ್ತಿರುತ್ತಾರೆ ಎಂದರು.
ಸಿಎಂ ವೈಮಾನಿಕ ಸಮೀಕ್ಷೆ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಅದರಿಂದ ಯಾವುದೇ ಪ್ರಯೋಜನ ಇಲ್ಲ. ಜನರ ಜತೆ ಮಾತನಾಡಿಲ್ಲ, ನೆರೆ ಪೀಡಿತ ಪ್ರದೇಶಗಳಿಗೆ ಹೋಗಿಲ್ಲ. ರಾಜ್ಯದಲ್ಲಿ 25 ಬಿಜೆಪಿ ಸಂಸದರು ಇದ್ದರೂ ಪ್ರಯೋಜನವಿಲ್ಲ. ಅಶ್ವಥ್ ನಾರಾಯಣ್‍ಗೆ ಹತ್ತು ಪಟ್ಟು ಧಮ್ ಇರಲಿ. ಆದರೆ ಪ್ರಧಾನಿ ಮೋದಿ ಬಳಿ ಹೋಗಿ ರಾಜ್ಯಕ್ಕೆ ಬರಬೇಕಾದ ಪರಿಹಾರ ತೆಗೆದುಕೊಂಡು ಬರಲಿ ಎಂದು ಕಿಡಿಕಾರಿದರು.
ನೆರೆ ಸಂತ್ರಸ್ತರಿಗೆ ಇನ್ನೂ ನಯಾ ಪೈಸೆ ಹಣ ನೀಡಿಲ್ಲ. ಬಿಜೆಪಿ ಸರ್ಕಾರ ಜನವಿರೋಧಿ ಸರ್ಕಾರವಾಗಿದೆ. ಯಡಿಯೂರಪ್ಪ ಚೆಕ್ ಮೂಲಕ ಲಂಚ ಪಡೆಯುತ್ತಿದ್ದರು. ಇದೀಗ ಅವರ ಮಗ ಆರ್‌ಟಿಜಿಎಸ್ ಮೂಲಕ ಲಂಚ ಪಡೆಯುತ್ತಿದ್ದಾರೆ. ಇಂತಹ ಭ್ರಷ್ಟ ಸರ್ಕಾರವನ್ನು ನಾನು ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ ಎಂದು ತಿಳಿಸಿದರು.