ಬೆಳಗಾವಿ: ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಯುವಕನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ವಾಡಿ ರಸ್ತೆಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಬೆಳಗಾವಿ ಅಜಾಮ್ ನಗರ ನಿವಾಸಿ ಶೆಹಬಾಜ್ (24) ಹತ್ಯೆಯಾದ ಯುವಕ. ಮೃತ ಶೆಹಬಾಜ್ ರೌಡಿಶೀಟರ್ ಆಗಿದ್ದ. ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇದ್ದಕ್ಕಿದ್ದಂತೆ ದಾಳಿ ನಡೆಸಿದ ಗುಂಪು ಹಲ್ಲೆ ಮಾಡಿ ಪರಾರಿಯಾಗಿದೆ. ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಶೆಹಬಾಜ್ನನ್ನ ಬಿಮ್ಸ್ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿಯೇ ಮೃತಪಟ್ಟಿದ್ದಾನೆ. ಈತನ ಮೇಲೆ ಕೊಲೆ ಸೇರಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗಿದೆ. ಶೆಹಬಾಜ್ ಹತ್ಯೆ ಸುದ್ದಿ ಹರಡುತ್ತಿದ್ದಂತೆಯೇ ಜಿಲ್ಲಾ ಆಸ್ಪತ್ರೆಯ ಬಳಿ ನೂರಾರು ಯುವಕರು ಸೇರಿದ್ದರು, ಪೊಲೀಸರು ಯುವಕರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.