ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2020 ಕಾರ್ಯಕ್ರಮ ಸೋಮವಾರ ಅರಮನೆ ಆವರಣದಲ್ಲಿ ಸರಳವಾಗಿ, ಸಂಪ್ರದಾಯಕವಾಗಿ ನೇರವೇರಿತು.
ಮಧ್ಯಾಹ್ನ 3 ಗಂಟೆಗೆ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ನೆರವೇರಿಸಿದರು. ಇದಾದ ನಂತರ ಮೆರವಣಿಗೆ ಆರಂಭವಾಯಿತು. ಅಂಬಾವಿಲಾಸ ಅರಮನೆ ಒಳಾವರಣದಲ್ಲಿ ಸರಿಯಾಗಿ ಮಧ್ಯಾಹ್ನ 3.54 ಗಂಟೆಗೆ ಶುಭ ಕುಂಭಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ಅಲಂಕೃತಗೊಂಡ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿದರು.
ಮೊದಲಿಗೆ ನಿಸಾನೆ ಆನೆ ವಿಕ್ರಮ ಹಾಗೂ ನೌಪತ್ ಆನೆ ಗೋಪಿ ಮೆರವಣಿಗೆಯಲ್ಲಿ ಸಾಗಿದವು. ನಂತರ ನಾದಸ್ವರ, ವೀರಗಾಸೆ, ಚೆಂಡೆ ಮೇಳ, ಮರ ಗಾಲು ವೇಷ, ಚಿಲಿಪಿಲಿ ಗೊಂಬೆ ಕಲಾವಿದರು ಪ್ರದರ್ಶನ ನೀಡುತ್ತಾ ಎಲ್ಲರನ್ನು ರಂಜಿಸಿದರು.
ಕರ್ನಾಟಕ ಪೊಲೀಸ್ ಬ್ಯಾಂಡ್ ವತಿಯಿಂದ ಆನೆ ಬಂಡಿ ಸ್ತಬ್ಧಚಿತ್ರ, ಬಳಿಕ ಅಶ್ವಾರೋಹಿ ಪಡೆಯ ಪ್ರಧಾನ ಕಮಾಂಡೆಂಟ್ ಕೆಎಆರ್ಪಿ ಮೌಂಟೆಂಡ್ ಕಂಪನಿ ತುಕಡಿಗಳು ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದವು.
ಚೊಚ್ಚಲಬಾರಿಗೆ ಚಿನ್ನದ ಅಂಬಾರಿ ಹೊತ್ತು ಅಭಿಮನ್ಯು, ಗಾಂಭೀರ್ಯದ ನಡಿಗೆಯಿಂದ 270 ಮೀಟರ್ ಮೆರವಣಿಗೆಯಲ್ಲಿ ಸಾಗಿತು. ಜೊತೆಗೆ ವಿಜಯಾ, ಕಾವೇರಿ ಆನೆಗಳು ಸಾಥ್ ನೀಡಿದವು.
ಜಾಗೃತಿ ಮೂಡಿಸಿದ ಸ್ತಬ್ಧಚಿತ್ರ: ಆರೋಗ್ಯ ಇಲಾಖೆ ವತಿಯಿಂದ ಕೋವಿಡ್-19 ಕುರಿತು ಜಾಗೃತಿ ಮೂಡಿಸುವ ಸ್ತಬ್ಧಚಿತ್ರ ಬೆಳಕು ಚೆಲ್ಲಿತು. ಸ್ತಬ್ಧಚಿತ್ರದಲ್ಲಿ ಮಾಸ್ಕ್ ಧರಸಿದ್ದ ವೈದ್ಯರೊಬ್ಬರ ಚಿತ್ರ ಎಲ್ಲರ ಗಮನ ಸೆಳೆಯಿತು.
ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಕೈಯನ್ನು ಸೊಪಿನಿಂದ ತೊಳೆದುಕೊಳ್ಳಿ, ಪರಸ್ಪರ ದೈಹಿಕ ಅಂತರ ಕಾಪಾಡಿ ಹಾಗೂ ಕೋವಿಡ್-19 ವಿರುದ್ಧದ ಹೋರಾಟ ನಮ್ಮೆಲ್ಲರ ಹೋರಾಟ ಎಂಬ ಜಾಗೃತಿ ಮೂಡಿಸುವ ಸಾಲುಗಳು ಕಂಡುಬಂದವು.
ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆ ಸರಳ, ಸಂಪ್ರದಾಯಿಕ ಹಾಗೂ ವರ್ಚುಯಲ್ ಆಗಿ ಆಚರಿಸುತ್ತಿರುವ ಈ ಬಾರಿಯ ದಸರಾ ಮಹೋತ್ಸವವು ಅರಮನೆ ಆವರಣಕ್ಕೆ ಸೀಮಿತವಾಗಿ ಹೆಚ್ಚು ಜನಸಂದಣಿ ಸೇರಿದಂತೆ ಮುಂಜಾಗ್ರತೆಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ, ಮೇಯರ್ ತಸ್ನೀಂ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಮೈಸೂರು ರಾಜಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಇನ್ನಿತರರು ಉಪಸ್ಥಿತರಿದ್ದರು.