ಪಾಟ್ನಾ: ಬಿಹಾರ ರಾಜ್ಯದ 243 ವಿಧಾನಸಭಾ ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಇಂದು (ಬುಧವಾರ) ಮೊದಲ ಹಂತದಲ್ಲಿ 71 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ.
2 ಕೋಟಿಗೂ ಅಧಿಕ ಮತದಾರರು ಒಟ್ಟು 1,066 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸುರಕ್ಷಿತವಾಗಿ ಮತದಾನ ಪ್ರಕ್ರಿಯೆ ನಡೆಸುವ ಸಲುವಾಗಿ ಚುನಾವಣಾ ಆಯೋಗವು ಈಗಾಗಲೇ ಮಾರ್ಗಸೂಚಿ ಹೊರಡಿಸಿದ್ದು, ಒಂದು ಮತಗಟ್ಟೆಯಲ್ಲಿ 1600ರಿಂದ 1000 ಮತದಾರರಿಗೆ ಮಾತ್ರ ಹಕ್ಕು ಚಲಾಯಿಸಲು ಅನುಮತಿ ನೀಡಿದೆ.
80 ವರ್ಷಕ್ಕಿಂತಲ ಮೇಲ್ಪಟ್ಟವರಿಗೆ ಪೋಸ್ಟರ್ ಕಾರ್ಡ್ ಮೂಲಕ ಮತದಾನ ಮಾಡುವುದಕ್ಕೆ ಅನುಮತಿ ನೀಡಲಾಗಿದೆ. ಅಲ್ಲದೆ, ವೋಟಿಂಗ್ ಯಂತ್ರವನ್ನು ಸ್ಯಾನಿಟೈಸ್ ಮಾಡುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಥರ್ಮಲ್ ಸ್ಕ್ರೀನಿಂಗ್ ಮತ್ತು ಸೋಪು, ನೀರಿನ ವ್ಯವಸ್ಥೆ ಕಲ್ಪಿಸಲು ಸೂಚಿಸಿದೆ.
ಪ್ರಮುಖವಾಗಿ ಮತದಾನ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕಡ್ಡಾಯವಾಗಿ ಸೂಚಿಸಿದೆ. ಮೊದಲ ಹಂತದ ಮತದಾನ ಪ್ರಕ್ರಿಯೆಯಲ್ಲಿ 2.14 ಕೋಟಿ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಈ ಪೈಕಿ 1.01 ಕೋಟಿ ಮಹಿಳೆಯರಾಗಿದ್ದು, 599 ತೃತೀಯ ಲಿಂಗಿಗಳಿದ್ದಾರೆಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
71 ವಿಧಾನಸಭಾ ಕ್ಷೇತ್ರಗಳಲ್ಲಿ 952 ಮಂದಿ ಪುರುಷ ಮತ್ತು 114 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗಯಾ ಕ್ಷೇತ್ರದಲ್ಲಿ ಅತೀ ಹೆಚ್ಚು ಎಂದರೆ, 27 ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ ಕಾಟೋರಿಯಾ ಕ್ಷೇತ್ರದಲ್ಲಿ ಅತಿ ಕಡಿಮೆ ಎಂದರೆ ಐವರು ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ.